16.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಅರುಣ್ ಯೋಗಿರಾಜ್ ಶಿಲ್ಪಕಲೆಯಲ್ಲಿ ಅರಳಿದ ಕರುನಾಡ ಮುತ್ಸದ್ದಿ ಶಾಮನೂರು ಶಿವಶಂಕರಪ್ಪ

ಮೈಸೂರು: ಅಯೋಧ್ಯೆಯ ರಾಮಲಲ್ಲಾ ಮೂರ್ತಿಯನ್ನು ಕೆತ್ತನೆ ಮಾಡುವ ಮೂಲಕ ವಿಶ್ವದಾದ್ಯಂತ ಮನೆಮಾತಾಗಿರುವ ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್, ಈಗ ಕರುನಾಡಿನ ಹಿರಿಯ ರಾಜಕಾರಣಿ, ಲಿಂಗಾಯತ ಸಮಾಜದ ಮುತ್ಸದ್ದಿ ನಾಯಕ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಭವ್ಯ ಪುತ್ಥಳಿಯನ್ನು ಕೆತ್ತನೆ ಮಾಡುವ ಮೂಲಕ ಮತ್ತೊಮ್ಮೆ ತಮ್ಮ ಕಲಾ ನೈಪುಣ್ಯತೆಯನ್ನು ಪ್ರದರ್ಶಿಸಿದ್ದಾರೆ.

ದಾವಣಗೆರೆಯ ಆನೆಕೊಂಡದ ಕಲ್ಲೇಶ್ವರ ರೈಸ್ ಮಿಲ್ ಆವರಣದ ಬೃಹತ್ 100 ಎಕರೆ ಪ್ರದೇಶದಲ್ಲಿ ನಡೆದ ‘ದಿ. ಶಾಮನೂರು ಶಿವಶಂಕರಪ್ಪ ನುಡಿ ನಮನ’ ಕಾರ್ಯಕ್ರಮದಲ್ಲಿ ಈ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಯಿತು. ರಾಜ್ಯದ ವಿವಿಧ ಪಕ್ಷಗಳ ನಾಯಕರು ಹಾಗೂ ಮಠಾಧೀಶರ ಸಮ್ಮುಖದಲ್ಲಿ ಈ ಪುತ್ಥಳಿಯನ್ನು ಅತ್ಯಂತ ಭಕ್ತಿಪೂರ್ವಕವಾಗಿ ಅನಾವರಣಗೊಳಿಸಲಾಯಿತು.

ಈ ವಿಶೇಷ ಕೆಲಸದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಶಿಲ್ಪಿ ಅರುಣ್ ಯೋಗಿರಾಜ್, ಮಾಜಿ ಸಚಿವರು ಹಾಗೂ ಸಮಾಜ ಸುಧಾರಕರಾದ ಶ್ರೀ ಶಾಮನೂರು ಶಿವಶಂಕರಪ್ಪ ಅವರ ಪ್ರತಿಮೆಯನ್ನು ಕೆತ್ತನೆ ಮಾಡುವ ಅವಕಾಶ ದೊರೆತಿದ್ದು ನನ್ನ ಭಾಗ್ಯ. ಇದು ಕೇವಲ ಒಂದು ಪ್ರತಿಮೆಯಲ್ಲ, ಅವರ ವ್ಯಕ್ತಿತ್ವದ ಮೇಲಿದ್ದ ಗೌರವಕ್ಕೆ ಅರ್ಪಿಸಿದ ಕಲಾಕೃತಿ ಎಂದು ಬರೆದುಕೊಂಡಿದ್ದಾರೆ.

ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ, ಶಿಕ್ಷಣ ಪ್ರೇಮಿಯಾಗಿ ಮತ್ತು ಪ್ರಭಾವಿ ರಾಜಕೀಯ ನಾಯಕರಾಗಿ ಶಾಮನೂರು ಶಿವಶಂಕರಪ್ಪ ಅವರು ಸಲ್ಲಿಸಿದ ಸೇವೆ ಅಪಾರ. ಡಿಸೆಂಬರ್ 14ರಂದು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದ ಅವರ ಸ್ಮರಣಾರ್ಥ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಭಾಗವಹಿಸಿದ್ದರು.

ಕೇವಲ ರಾಜಕಾರಣಿಗಳಷ್ಟೇ ಅಲ್ಲದೆ, ಪಂಚಪೀಠದ ರಂಭಾಪುರಿ, ಕಾಶಿ, ಶ್ರೀಶೈಲ, ಉಜ್ಜಯಿನಿ ಶ್ರೀಗಳು ಸೇರಿದಂತೆ ಸಿರಿಗೆರೆ, ಸುತ್ತೂರು, ಸಿದ್ದಗಂಗಾ ಮತ್ತು ಪಂಚಮಸಾಲಿ ಮಠದ ಸ್ವಾಮೀಜಿಗಳು ಭಾಗವಹಿಸಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು.

94 ವರ್ಷಗಳ ಸುದೀರ್ಘ ಮತ್ತು ಅರ್ಥಪೂರ್ಣ ಜೀವನ ನಡೆಸಿದ ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆ ಅಭಿವೃದ್ಧಿಯ ಹಿಂದಿನ ಚಾಲಕ ಶಕ್ತಿಯಾಗಿದ್ದರು. ಅವರ ಅಂತ್ಯಕ್ರಿಯೆಯನ್ನು ಅವರ ಪತ್ನಿಯ ಸಮಾಧಿಯ ಪಕ್ಕದಲ್ಲೇ ಮಾಡಲಾಗಿದ್ದು, ಈಗ ಅದೇ ದಾವಣಗೆರೆಯ ಮಣ್ಣಿನಲ್ಲಿ ಅವರ ಸ್ಮರಣೆಗಾಗಿ ಶಿಲ್ಪಿ ಅರುಣ್ ಯೋಗಿರಾಜ್ ರೂಪಿಸಿದ ಪುತ್ಥಳಿ ಜನಮಾನಸದಲ್ಲಿ ಅವರ ನೆನಪನ್ನು ಚಿರಸ್ಥಾಯಿಯಾಗಿಸಲಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles