ಮನೆ ಮಂಜೂರಾತಿ ಹೆಸರಿನಲ್ಲಿ ₹30 ಸಾವಿರ ವಸೂಲಿ ಆರೋಪ
ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೇವೇಂದ್ರಪ್ಪ ಭಜಂತ್ರಿ ಆಗ್ರಹ
ಹುಣಸಗಿ : ಕೊಡೆಕಲ್ ಹಾಗೂ ಜೋಗುಂಡ ಬಾವಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಯ ಅಲೆಮಾರಿ ಕೊರಮ ಸಮುದಾಯದ ಬಡ ಕುಟುಂಬಗಳಿಂದ ಮನೆ ಮಂಜೂರಾತಿ ಮಾಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಶಂಕ್ರಪ್ಪ ಭಜಂತ್ರಿ ಹಾಗೂ ಅವರ ಪತ್ನಿ ಮಹಾದೇವಿ ಅವರು ಸೇರಿಕೊಂಡು, ಒಂದು ಮನೆಗೆ ₹30,000 ಹಣ ನೀಡಿದರೆ ಮನೆ ಮಂಜೂರಾತಿ ಮಾಡಿಸಿಕೊಡುವುದಾಗಿ ಹೇಳಿ, ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿರುವ ಬಡ ಕುಟುಂಬಗಳಿಂದ ಹಣ ಕೇಳುತ್ತಿದ್ದಾರೆ ಎಂದು ಜೋಗುಂದ ಬಾಯಿ ನಿವಾಸಿ ಶ್ರೀ ದೇವೇಂದ್ರಪ್ಪ ಭಜಂತ್ರಿ ಆರೋಪಿಸಿದ್ದಾರೆ.
ಮನೆ ಮಂಜೂರಾತಿ ಮಾಡಿಸುವುದಾಗಿ ಹೇಳಿ ಹಣ ಪಡೆಯುತ್ತಿರುವವರಿಗೆ ಸರ್ಕಾರದ ವಸತಿ ಯೋಜನೆಗಳ ನಿಯಮಗಳ ಬಗ್ಗೆ ಸಮರ್ಪಕ ಕಾನೂನು ಅರಿವು ಇಲ್ಲದಿರುವುದರಿಂದ, ಬಡ ಮತ್ತು ಮುಗ್ಧ ಕುಟುಂಬಗಳನ್ನು ನಂಬಿಸಿ ಹಣ ಪಡೆಯಲಾಗುತ್ತಿದೆ ಎಂದು ಅವರು ದೂರಿದ್ದಾರೆ.
ಈ ಹಣ ವಸೂಲಿ ಪ್ರಕರಣದ ಹಿಂದೆ ಯಾರಾದರೂ ಪ್ರಭಾವಿ ವ್ಯಕ್ತಿಗಳು ಅಥವಾ ಮಧ್ಯವರ್ತಿಗಳ ಕೈವಾಡವಿದೆಯೇ ಎಂಬುದನ್ನು ಅಧಿಕಾರಿಗಳು ತನಿಖೆ ನಡೆಸಬೇಕು. ಸಂಬಂಧಪಟ್ಟವರ ಹೆಸರುಗಳನ್ನು ಬಹಿರಂಗಪಡಿಸದೆ, “ನಾವೇ ಮನೆ ಕೊಡಿಸುತ್ತೇವೆ” ಎಂದು ಹೇಳಿ ಹಣ ಪಡೆಯುವುದು ಸತ್ಯವಾಗಿದ್ದರೆ, ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೇವೇಂದ್ರಪ್ಪ ಭಜಂತ್ರಿ ಆಗ್ರಹಿಸಿದ್ದಾರೆ.
ಕೂಲಿನಾಲಿ ಮಾಡಿ ಜೀವನ ನಡೆಸುತ್ತಿರುವ ಬಡ ಕುಟುಂಬಗಳು ಮನೆ ಸಿಗುತ್ತದೆ ಎಂಬ ನಂಬಿಕೆಯಿಂದ ಹಣ ನೀಡುತ್ತಿರುವ ಸಾಧ್ಯತೆ ಇರುವುದರಿಂದ, ಈ ಬಗ್ಗೆ ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಹಣ ನೀಡಿರುವ ಕುಟುಂಬಗಳ ಹೇಳಿಕೆಗಳನ್ನು ದಾಖಲಿಸಿಕೊಂಡು, ಹಣ ವಸೂಲಿ ಮಾಡಿರುವುದು ದೃಢಪಟ್ಟಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೇವೇಂದ್ರಪ್ಪ ಭಜಂತ್ರಿ ದೂರು ಸಲ್ಲಿಸಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ಬಡ ಸಮುದಾಯದ ಜನರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

