16.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

“ಚುನಾವಣೆಗೂ ಎರಡೂವರೆ ವರ್ಷಗಳ ಮೊದಲೇ ಒಂದು ಕ್ಷೇತ್ರ ಕಳೆದುಕೊಂಡ ಬಿಜೆಪಿ”

“ಚುನಾವಣೆಗೂ ಎರಡೂವರೆ ವರ್ಷಗಳ ಮೊದಲೇ ಒಂದು ಕ್ಷೇತ್ರ ಕಳೆದುಕೊಂಡ ಬಿಜೆಪಿ”

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಬಾಕಿ ಇದೆ. ಆದರೆ ಈಗಾಗಲೇ ಭಾರತೀಯ ಜನತಾ ಪಕ್ಷ ಒಂದು ಕ್ಷೇತ್ರವನ್ನು ಕಳೆದುಕೊಂಡೇಬಿಟ್ಟಿದೆ!

ಹೌದು! ಒಟ್ಟು 224 ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವನ್ನು ಬಿಜೆಪಿ ಈಗಾಗಲೇ ಕಳೆದುಕೊಂಡುಬಿಟ್ಟಿದೆ. ಅದು ಮೈಸೂರು ಜಿಲ್ಲೆಯ ‘ಚಾಮರಾಜ’ ವಿಧಾನಸಭಾ ಕ್ಷೇತ್ರ.

‘ಚಾಮರಾಜ’ ಬಿಜೆಪಿ ಗೆಲ್ಲಲಾಗದ ಕ್ಷೇತ್ರವೇನೂ ಅಲ್ಲ. ಅದು ದಿ. ಶಂಕರಲಿಂಗೇಗೌಡರು ಬಿಜೆಪಿಯಿಂದ ನಾಲ್ಕು ಬಾರಿ ಸತತವಾಗಿ ಗೆದ್ದ ಕ್ಷೇತ್ರ. ಎಲ್. ನಾಗೇಂದ್ರ ಅವರು ಒಂದು ಬಾರಿ ಗೆದ್ದ ಮತ್ತು ಇನ್ನೊಂದು ಬಾರಿ ಅತ್ಯಲ್ಪ ಮತಗಳ ಅಂತರದಿಂದ ಸೋತ ಕ್ಷೇತ್ರ. ಆದರೆ ಮುಂದಿನ ಚುನಾವಣೆಯ ಟಿಕೆಟ್ಟಿಗಾಗಿ ಇದೀಗ ಪಕ್ಷದ ನಾಯಕರ ಬಹಿರಂಗ ಕಿತ್ತಾಟಗಳಿಂದಾಗಿ ಸರಿಪಡಿಸಲಾಗದ ಒಡಕು ಉಂಟಾಗಿದ್ದು, ಮುಂಬರುವ ಚುನಾವಣೆಯಲ್ಲಿ ಚಾಮರಾಜದಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆಯೇ ಇಲ್ಲ ಎನ್ನುವ ಹಂತಕ್ಕೆ ಬಂದಾಗಿದೆ.

ಕೆಲವು ವರ್ಷಗಳ ಮೊದಲಿನಿಂದಲೂ ಪಕ್ಷದೊಳಗೆ (ಪ್ರಮುಖವಾಗಿ ಇಬ್ಬರ ನಡುವೆ) ಅಸಮಾಧಾನ ಇತ್ತಾದರೂ, ಇದೀಗ ಯಾವುದೇ ಮುಲಾಜು ಇಟ್ಟುಕೊಳ್ಳದೆ ನೇರಾನೇರವಾಗಿ ಯುದ್ಧಕ್ಕೆ ಇಳಿದುಬಿಟ್ಟಿದ್ದಾರೆ! ಆ ಮೂಲಕ ಕ್ಷೇತ್ರದ ಕಾರ್ಯಕರ್ತರು ನೇರಾನೇರ ಪರಸ್ಪರ ಬಡಿದಾಟಕ್ಕಿಳಿಯಲು ಸೂಚನೆ ಸಿಕ್ಕಂತಾಗಿದೆ. ಮತ್ತು ತಮ್ಮ ನಾಯಕರ ಆಶಯದಂತೆಯೇ ಕಾರ್ಯಕರ್ತರೂ ಕೂಡ ಈಗಾಗಲೇ ತೋಳೇರಿಸಿಕೊಂಡು ಫೀಲ್ಡಿಗಿಳಿದಿದ್ದಾರೆ.

ಒಂದೇ ಪಕ್ಷದ ಕಾರ್ಯಕರ್ತರುಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಅನ್… ಅಕ್ನ್ ಪದಗಳ ವಿನಿಮಯ ಅತ್ಯಂತ ಸರಾಗವಾಗಿ ನಡೆಯುತ್ತಿದೆ! ಆ ಮೂಲಕ ತಮ್ಮ ನಾಯಕರ ಮನಸ್ಸಂತೋಷಪಡಿಸುವ ಪ್ರಯತ್ನದಲ್ಲೇ ತಮ್ಮ ಸಂತೋಷವನ್ನು ಕಾಣುತ್ತಿದ್ದಾರೆ! ಮುಂದಿನ ಕೆಲವೇ ಸಮಯದಲ್ಲಿ ಟಿಕೆಟ್ ಆಕಾಂಕ್ಷಿ ನಾಯಕರ ಅಭಿಮಾನಿಗಳ ನಡುವೆ ಪರಸ್ಪರ ಬೀದಿಬಡಿದಾಟಗಳು ನಡೆಯುವ ಸಾಧ್ಯತೆಯೂ ದಟ್ಟವಾಗಿದೆ.

ಈ ನಡುವೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ದಿನೇ ದಿನೇ ಏರಿಕೆ ಕಾಣುತ್ತಿದೆ. ಡಾ. ಸುಶ್ರುತ್ ಗೌಡ ಅವರು “ನಾನೇನೂ ಸನ್ಯಾಸಿಯಲ್ಲ” ಎಂದು ಹೇಳುವ ಮುಖಾಂತರ ಟಿಕೆಟ್ ಬಡಿದಾಟದ ಕಣದಲ್ಲಿ ನೀವಿಬ್ಬರೇ ಅಲ್ಲ, ನಾನೂ ಇದ್ದೇನೆ ಎಂದು ಬಹಿರಂಗವಾಗಿಯೇ ಸಾರಿದ್ದಾರೆ.

ಅದೇ ಸಮಯದಲ್ಲಿ ಮತ್ತೊಂದು ಹಳೇ ಹುಲಿಯ ಎಂಟ್ರಿಯಾಗಿದ್ದು, ಇತ್ತೀಚೆಗಷ್ಟೇ #ಭಗೀರಥ ಎನ್ನುವ ಸಿನಿಮಾದಿಂದ ರಾಜ್ಯದಾದ್ಯಂತ ಜನಮನ ಸೆಳೆದ ಒಂದು ಕಾಲದ ‘ಯೂಥ್ ಐಕಾನ್’ ಜಯಪ್ರಕಾಶ್ (ಜೆಪಿ) ಅವರೂ ತಮ್ಮ ತೊಡೆ ತಟ್ಟಿದ್ದಾರೆ! ಜೀವರಾಜ್ ಆಳ್ವ ಅವರ ಕಾಲದಲ್ಲೇ ಕ್ಷೇತ್ರದ ನಾಯಕರಾಗಿ ಗುರುತಿಸಿಕೊಂಡಿದ್ದ, ತಮಗೆ ಸಿಕ್ಕ ಅವಕಾಶವನ್ನು ದಿ. ಶಂಕರಲಿಂಗೇಗೌಡರಿಗೆ ಬಿಟ್ಟುಕೊಟ್ಟಿದ್ದ ಮತ್ತು ಹಲವು ದಶಕಗಳ ಕಾಲ ಪಕ್ಷನಿಷ್ಠೆ ಬದಲಿಸದ ಹೆಗ್ಗಳಿಕೆ ಜಯಪ್ರಕಾಶ್ ಅವರಿಗಿದೆ.

ಮಿತ್ರಪಕ್ಷ ಜೆ ಡಿ ಎಸ್ ನ ಸಾರಾ ಮಹೇಶ್ ಅವರೂ ಈಗಾಗಲೇ ತಮ್ಮ ಒಂದು ಕಾಲು ಚಾಮರಾಜ ಕ್ಷೇತ್ರದಲ್ಲಿ ನೆಟ್ಟಿದ್ದು, ಅವರೇನಾದರೂ ಗಂಭೀರವಾಗಿ ಪ್ರಯತ್ನಿಸಿದರೆ ಉಳಿದವರೆಲ್ಲಾ ಸೈಲೆಂಟಾಗಿ ಸೈಡಿಗೆ ನಿಲ್ಲದೆ ಬೇರೆ ದಾರಿಯೇ ಇಲ್ಲ.

ಎಲ್ಲರೂ ತಮ್ಮ ತಂದೆಯ ಹೆಸರು ಹೇಳುತ್ತಿರುವಾಗ ಅವರ ಮಗನಾದ ನಾನೇ ಏಕೆ ಪಕ್ಷದಿಂದ ಅವಕಾಶ ಕೇಳಬಾರದು ಎಂದು ನಂದೀಶ್ ಪ್ರೀತಮ್ ಅವರು ಅಂದುಕೊಂಡಿದ್ದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ.

ಇವರೆಲ್ಲರ ಜೊತೆಗೆ ಜನಪ್ರಿಯ ಮತ್ತು ಸಜ್ಜನ ಶಾಸಕರಾಗಿ ಮನೆಮಾತಾಗಿದ್ದ ದಿ. ವಾಸು ಅವರ ಪುತ್ರ ಕವೀಶ್ ಗೌಡರೂ ಕ್ಷೇತ್ರದ ಮೇಲೆ ತಮ್ಮ ಹಕ್ಕನ್ನು ಪ್ರತಿಪಾದಿಸುವ ಸಿದ್ಧತೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಇದಿಷ್ಟೂ ಒಂದೆಡೆಯಾದರೆ, ಹೈಕಮಾಂಡ್ ಮಟ್ಟದಲ್ಲಿ ಹೊಂದಾಣಿಕೆ ಏರ್ಪಟ್ಟಲ್ಲಿ MKPK ಪಕ್ಷದ ಸಂಸ್ಥಾಪಕ ಅಧ್ಯಕ್ಷರೂ ಅದೇ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ!

ಯಾವುದೇ ಪಕ್ಷದ ಒಳಗೆ ಪರಸ್ಪರ ಸ್ಪರ್ಧೆ ಇರುವುದು ಒಳ್ಳೆಯದೇ. ಆದರೆ ಅದು ದ್ವೇಷ ರಾಜಕಾರಣಕ್ಕೆ ತಿರುಗಿದರೆ ಮಾತ್ರ ಅಪಾಯ ಕಟ್ಟಿಟ್ಟ ಬುತ್ತಿ. ಚಾಮರಾಜ ಕ್ಷೇತ್ರದ ಬಿಜೆಪಿಯಲ್ಲಿ ಪರಸ್ಪರರ ನಡುವಿನ ಸ್ಪರ್ಧೆಯು ಈಗಾಗಲೇ ದ್ವೇಷರಾಜಕಾರಣದ ಹಂತಕ್ಕೆ ತಲುಪಿಯಾಗಿದೆ! ಯಾರಿಗೇ ಟಿಕೆಟ್ ಕೊಟ್ಟರೂ ಇನ್ನೊಬ್ಬರು ಅವರನ್ನು ಸೋಲಿಸುವ ಪಣ ತೊಟ್ಟಾಗಿದೆ. ಕಾರ್ಯಕರ್ತರ ನಡುವೆ ವೈರತ್ವ ದಿನೇ ದಿನೇ ಮತ್ತಷ್ಟು ಹೆಚ್ಚಾಗುತ್ತಿದೆಯೇ ಹೊರತೂ ಕಡಿಮೆಯಾಗುತ್ತಿಲ್ಲ. ಕಡಿಮೆ ಮಾಡುವ ಪ್ರಯತ್ನವನ್ನು ನಾಯಕರೂ ಮಾಡುತ್ತಿಲ್ಲ. ಕಾರ್ಯಕರ್ತರು ಪರಸ್ಪರ ಎಷ್ಟು ಹೆಚ್ಚು ವೈರತ್ವ ಬೆಳೆಸಿಕೊಳ್ಳುತ್ತಾರೋ, ಅಷ್ಟು ಹೆಚ್ಚು ಲಾಭ ನಮಗೇ ಆಗುತ್ತದೆ ಎನ್ನುವುದು ನಾಯಕರ ನಂಬಿಕೆ.

ಬಿಜೆಪಿಯಿಂದ ಯಾರೇ ಟಿಕೆಟ್ ಪಡೆದರೂ, ಇನ್ನುಳಿದ ನಾಯಕರು ಅವರನ್ನು ಸೋಲಿಸಿಯೇ ಸೋಲಿಸುತ್ತಾರೆ. ಆದ್ದರಿಂದ ಚುನಾವಣೆಗೂ ಎರಡೂವರೆ ವರ್ಷಗಳ ಮೊದಲೇ ಬಿಜೆಪಿ ‘ಚಾಮರಾಜ’ ಎನ್ನುವ ಒಂದು ಕ್ಷೇತ್ರವನ್ನು ಕಳೆದುಕೊಂಡಾಗಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಉಳಿದಿಲ್ಲ.

@ಪ್ರವೀಣ ಕುಮಾರ
ಲೇಖಕರು ಕಿರಿಯ ರಾಜಕೀಯ ವಿಶ್ಲೇಷಕರು

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles