16.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಬಾಬಾ ಸಾಹೇಬರು ಭಾರತ ದೇಶದ ನಿಜ ಭಾಗ್ಯವಿಧಾತ: ಪಲ್ಲವಿ ಜಿ

ಬಾಬಾ ಸಾಹೇಬರು ಭಾರತ ದೇಶದ ನಿಜ ಭಾಗ್ಯವಿಧಾತ: ಪಲ್ಲವಿ ಜಿ

ಬೆಂಗಳೂರು ನಗರ ಜಿಲ್ಲೆ, ಮಾರ್ಚ್ 10 (ಕರ್ನಾಟಕ ವಾರ್ತೆ): ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಸಮಾನತೆ ತರಲು ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟವರು ಡಾ. ಬಿ ಆರ್ ಅಂಬೇಡ್ಕರ್. ಅವರು ಭಾರತ ದೇಶದ ನಿಜ ಭಾಗ್ಯವಿಧಾತ ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಜಿ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.

ನಗರದ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಡಾ. ಬಿ ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ, ಡಾ, ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಇವರ ಸಹಯೋಗದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ನಗರ ಜಿಲ್ಲೆ ಏರ್ಪಡಿಸಿದ್ದ “ಭೀಮ ಗಾಯನ”ವಿಶೇಷ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಸಂವಿಧಾನ ಪೀಠಿಕೆಯು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಐಕ್ಯತೆ ಮತ್ತು ಭ್ರಾತೃತ್ವದ ಬದ್ಧತೆಯನ್ನು ಪ್ರತಿಪಾದಿಸುತ್ತದೆ.ಅಂಬೇಡ್ಕರ್ ರಚಿತ ಈ ಸಂವಿಧಾನದ ಪೀಠಿಕೆಯೇ ಅವರು ಒಬ್ಬ ವಿಶ್ವ ಮಾನವ ಎಂಬುದನ್ನು ಸಾಬೀತು ಪಡಿಸುತ್ತದೆ ಎಂದ ಅವರು ಬಾಬಾ ಸಾಹೇಬರು ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಭಾರತದ ಎಲ್ಲ ಪ್ರಜೆಗಳ ಸಮಾನ ಹಕ್ಕುಗಳಿಗೆ ಹೋರಾಡಿದವರು. ಅವರ ಆಶಯ ಆದರ್ಶಗಳನ್ನು ಈ ದೇಶದ ಯುವ ಸಮುದಾಯ ಅರ್ಥ ಮಾಡಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ಕೊಟ್ಟರು.

ಮಹಿಳೆಯರಿಗೆ ಹೆಚ್ಚಿನ ಹಕ್ಕುಗಳನ್ನು ಪ್ರತಿಪಾದಿಸಿದ ಹಿಂದು ಕೋಡ್ ಬಿಲ್ಲನು ತಿರಸ್ಕರಿಸಿದ ಸಂದರ್ಭದಲ್ಲಿ ಅಂಬೇಡ್ಕರ್ ಅವರು ತಮ್ಮ ಸಚಿವ ಪದವಿಗೆ ರಾಜಿನಾಮೆ ನೀಡುತ್ತಾರೆ. ಅಂತಹ ಕಾರ್ಯ ನಿಷ್ಠೆ ಇಂದಿನ ಸಂದರ್ಭದಲ್ಲಿ ಕಾಣುವುದೇ ಅತ್ಯಂತ ವಿರಳ. ಹಾಗಾಗಿ ಅಂಬೇಡ್ಕರ್ ಇಂದಿಗೂ ನಮಗೆ ಅತ್ಯಂತ ಪ್ರಸ್ತುತ ಎಂದ ಅವರು, ದೇಶದಲ್ಲಿ ಮಹಿಳೆಯರನ್ನು ಒಂದು ವರ್ಗವನ್ನಾಗಿಸಿ ಮನೆಗೆ ಸೀಮಿತವಾಗಿರಿಸಿದ್ದ ಪರಿಸ್ಥಿತಿ ಒಂದು ಕಾಲದಲ್ಲಿ ಇತ್ತು, ಅಂತಹ ಸಂದರ್ಭದಲ್ಲಿ ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ಅವರು ಮಹಿಳೆಯರ ಶಿಕ್ಷಣಕ್ಕೆ ಹೋರಾಡಿದವರು. ಇಂದು ಅವರ ಪುಣ್ಯಸ್ಮರಣೆಯ ದಿನದಂದು ನಾವೆಲ್ಲರೂ ಕೃತಜ್ಞತಾ ಭಾವದಿಂದ ಅವರನ್ನು ನೆನೆಯಬೇಕಿದೆ ಎಂದರು.

ಹಾಡುಗಳು ಹೋರಾಟದ ಸಾಧನ : ಪಿಚ್ಚಳ್ಳಿ ಶ್ರೀನಿವಾಸ್

ಜಾನಪದ ಕಲಾವಿದರಾದ ಪಿಚ್ಚಳ್ಳಿ ಶ್ರೀನಿವಾಸ್ ಅವರು ಮಾತನಾಡಿ ಕನ್ನಡ ನಾಡಿನಲ್ಲಿ ಸಾಮಾಜಿಕ ಹೋರಾಟಗಳಲ್ಲಿ ಹಾಡುಗಳು ಅತ್ಯಂತ ಪ್ರಬಲ ಸಾಧನವಾಗಿದ್ದವು. ಇಂದಿನ ಯುವ ಜನತೆಗೆ “ಭೀಮ ಗಾಯನ”ದ ಹಾಡುಗಳು ಅಂಬೇಡ್ಕರ್ ಅವರ ಬದುಕಿನ ಹೋರಾಟಗಳ, ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ ಎಂದರು. ನಾವೆಲ್ಲರೂ ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ತನ್ಮೂಲಕ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಿಕೊಳ್ಳಬೇಕು ಎಂದರು.

ಅಂಬೇಡ್ಕರ್ ಅವರನ್ನು ಇಂಗ್ಲೆಂಡ್ ನಲ್ಲಿ ನಡೆದ ಎರಡನೇ ದುಂಡು ಮೇಜಿನ ಸಭೆಗೆ ಆಹ್ವಾನಿಸಬೇಕೆಂದು ಕರ್ನಾಟಕದ ಕೆಜಿಎಫ್ ನ ದಲಿತ, ಕಾರ್ಮಿಕ ವರ್ಗದ ಸುಮಾರು 13 ಸಾವಿರ ಜನರು ಟೆಲಿಗ್ರಾಂ ಗಳನ್ನು ಕಳಿಸಿದ್ದರು. ಈ ಐತಿಹಾಸಿಕ ವಿಷಯದಿಂದ ಅಚ್ಚರಿಗೊಳಗಾದ ಬಾಬಾ ಸಾಹೇಬರು ಸಭೆಯಿಂದ ಮರಳಿದ ನಂತರ ಕೆಜಿಎಫ್ ಗೆ ಭೇಟಿ ನೀಡಿದರು. ಇದು ಅವರ ನಾಯಕತ್ವ ಗುಣದ ಒಂದು ಉದಾಹರಣೆ ಎಂದು ಅವರು ತಿಳಿಸಿದರು.

ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ರಮೇಶ.ಬಿ, ಅವರು ಮಾತನಾಡಿ ಭೀಮ ಗಾಯನವು ಒಂದು ಅದ್ಬುತವಾದ ಹಾಗೂ ಅರ್ಥಪೂರ್ಣವಾದ ಕಾರ್ಯಕ್ರಮವಾಗಿದ್ದು ಅಂಬೇಡ್ಕರ್ ಕುರಿತ ಗಾಯನವು ವಿದ್ಯಾರ್ಥಿಗಳಲ್ಲಿ ಅವರ ತತ್ವ ಹಾಗೂ ಆಶಯಗಳ ಅರಿವು ಮೂಡಿಸುತ್ತದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಸಂವಿಧಾನ ಪೀಠಿಕೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬೆಂಗಳೂರು ನಗರ ಜಿಲ್ಲೆಯ ಉಪ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಅವರು ಭೋಧಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ದಕ್ಷಿಣ ಭಾರತದಲ್ಲಿ ಬುದ್ಧ ವಿಹಾರಗಳನ್ನು ನವೀಕರಿಸಿ, ಪುನರ್ ನಿರ್ಮಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು. ಮೈಸೂರು ಅರಸರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ ಅವರು, ಬೆಂಗಳೂರಿನಲ್ಲಿ ಬೌದ್ಧ ಧರ್ಮದ ಚಟುವಟಿಕೆಗಳಿಗೆ ಅತ್ಯಂತ ಸೂಕ್ತ ಪರಿಸರವಿದ್ದು, ಭೂಮಿ ಒದಗಿಸಬೇಕಾಗಿ ಕೋರಿದ್ದರು. ಅದರಂತೆ, ಅರಸರು 5 ಎಕರೆ ಜಾಗವನ್ನು ನೀಡಿದರು ಎಂದು ಮತ್ತು ಆ ಜಾಗದಲ್ಲಿ ವಿಹಾರಗಳನ್ನು ನಿರ್ಮಿಸಿ ಬೌಧ ಧರ್ಮದ ಪ್ರಚಾರ ನಡೆಸಲಾಗುವುದು ಎಂದು ತಮ್ಮ ಪುಸ್ತಕದಲ್ಲಿ ಬರೆದಿದ್ದರು ಎಂದರು.

ಅದೇ ರೀತಿ ಕರ್ನಾಟಕದಲ್ಲಿ ಒಟ್ಟು 12 ಸ್ಥಳಗಳಿಗೆ ಅಂಬೇಡ್ಕರ್ ಅವರು ಭೇಟಿ ನೀಡಿದ್ದು, ಈ ಸ್ಥಳಗಳಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಭೀಮ ಗಾಯನ ಕಾರ್ಯದಕ್ರಮವನ್ನು ಹಮ್ಮಿಕೊಂಡಿದೆ ಎಂದು ಮಾಹಿತಿ ನೀಡಿದರು.

ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆಯಡಿ ನಡೆದ “ಭೀಮ ಗಾಯನ” ಕಾರ್ಯಕ್ರಮವನ್ನು ಮೈಸೂರಿನ ʼಅಮ್ಮ ವಸುಂಧರೆ ಕಾಲತಂಡʼದ ಕಲಾವಿದರು ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಮಾವಳ್ಳಿ ಶಂಕರ್, ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೋ.ಕೆ.ಆರ್.ಜಲಜಾ, ಸಿಂಡಿಕೇಟ್ ಸದಸ್ಯರಾದ ಡಾ. ಫ್ರಾನ್ಸಿಸ್ ಹಾಗೂ ವಿಶ್ವವಿದ್ಯಾನಿಲಯದ ಬೋಧಕ/ ಬೋಧಕೇತರ ಸಿಬ್ಬಂದಿ ಹಾಗೂ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles