ಬೆಳಗಾವಿ: ಸಿಎಂ ವಿರುದ್ದವೇ ಸಿಡಿದೆದ್ದ ಡಿಕೆಶಿ ಸಂಬಂಧಿ ಎಸ್.ರವಿ, ಡ್ರಗ್ಸ್ ಗಾಂಜಾ ಮಾಫಿಯಾ ಕಡಿವಾಣ ಹಾಕುತ್ತೇವೆ ಎಂದ ಗೃಹ ಸಚಿವ, ನಾನು ಜೈಲು ಸಚಿವನಾಗಿದ್ದೆ, ಜೈಲಲ್ಲೂ ನನಗೆ ಯಾವ ಕರೆಯೂ ಬಂದಿಲ್ಲ ಎಂದ ಡಿಸಿಎಂ, ಶಕ್ತಿ ಯೋಜನೆ ಬಾಕಿ ಹಣ ಬರಬೇಕು, ಅಧಿವೇಶನ ಮುಗಿದ ಬಳಿಕ ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಸಿಎಂ ಜೊತೆ ಚರ್ಚೆ ಎಂದ ಸಚಿವ ರಾಮಲಿಂಗಾರೆಡ್ಡಿ, ಈ ನಡುವೆ ಕಂದಾಯ ಸಚಿವ ಕೃಷ್ಣ ಭೈರೆಗೌಡ ವಿರುದ್ದದ ಭೂಕಬಳಿಕೆ ಆರೋಪದ ಚರ್ಚೆಗೆ ಸಿಗದ ಅವಕಾಶ..
ಇದು ವಿಧಾನ ಪರಿಷತ್‌ನ ಒಂಭತ್ತನೇ ದಿನದ ಕಲಾಪದಲ್ಲಿ ಕಂಡು ಬಂದ ಪ್ರಮುಖ ಹೈಲೆಟ್ಸ್
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ನಾಳೆ ತೆರೆ ಬೀಳಲಿದೆ, ಒಂಭತ್ತನೇ ದಿನವಾದ ಇಂದು ವಿಧಾನ ಪರಿಷತ್‌ನಲ್ಲಿ ಹಲವು ಗಂಭೀರ ಚರ್ಚೆಗಳು ನಡೆದವು, ಕಾಡು ಕುರುಬ, ಜೇನು ಕುರುಬ ಸೇರಿದಂತೆ ಆದಿವಾಸಿಗಳ ಸಮಸ್ಯೆಗಳ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಂಬಂಧಿಯೂ ಆಗಿರುವ ಕಾಂಗ್ರೆಸ್ ಸದಸ್ಯ ರವಿ ಕೇಳಿದ್ದ ಪ್ರಶ್ನೆಗೆ ಸಿಎಂ ಲಿಖಿತ ಉತ್ತರ ನೀಡಿದ್ದಾರೆ, ಸಿಎಂ ಉತ್ತರದಿಂದ ಅಸಮಧಾನಗೊಂಡ ರವಿ ನಿರಾಶದಾಯಕ ಉತ್ತರವನ್ನ ಸಿಎಂ ಕೊಟ್ಟಿದ್ದಾರೆ, ಇಂತಹ ಉತ್ತರ ನಾನು ನಿರೀಕ್ಷೆ ಮಾಡಿರಲಿಲ್ಲ, ಕೊಡಗು ಭಾಗದಲ್ಲಿರುವ ಕುಡಿಯ ಪಣಿಯ ಸಮುದಾಯಗಳ ಅಭಿವೃದ್ಧಿಗೆ ಯಾಕೆ ಮೀನಾಮೇಷ ಎಂದು ಗುಡುಗಿದ್ರು, ಇದಕ್ಕೆ ಪ್ರತಿಕ್ರಿಯಿಸಿದ ಸಭಾನಾಯಕ ಬೋಸರಾಜು ಸಿಎಂ ಜೊತೆ ಚರ್ಚೆ ಮಾಡಿ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಅನುಧಾನ ಕೊಡಿಸುವುದಾಗಿ ಭರವಸೆ ನೀಡಿದರು.
ಇನ್ನು ರಾಜ್ಯದ ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆಯ ಬಗ್ಗೆ ಗೃಹ ಸಚಿವರನ್ನ ಪ್ರಶ್ನಿಸಿದ ಬಿಜೆಪಿಯ ಕೇಶವ ಪ್ರಸಾದ್, ಸರ್ಕಾರ ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ ಎಂದು ಆರೋಪಿದ್ರು, ಇದಕ್ಕೆ ಉತ್ತರಿಸಿದ ಡಾ.ಜಿ.ಪರಮೇಶ್ವರ್, ಡ್ರಗ್ಸ್ ದಂಧೆ ವಿರುದ್ಧ ಯುದ್ಧ ಘೋಷಣೆ ಮಾಡಿದ್ದೇವೆ, ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಸಿಎಂ ಹೇಳಿದ್ದಾರೆ, 2025ರಲ್ಲಿ 185 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದೇವೆ, ವಿದೇಶದ ವಿದ್ಯಾರ್ಥಿಗಳು ಡ್ರಗ್ಸ್ ದಂಧೆಗೆ ಇಳಿದಿದ್ದಾರೆ, ಅವರನ್ನು ಹಿಡಿದಿದ್ದೇವೆ, 300ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಡಿಪೋರ್ಟ್ ಮಾಡಿದ್ದೇವೆ, ಎಲ್ಲಾ ಶಾಲಾ ಕಾಲೇಜುಗಳಿಗೆ ಭೇಟಿ ನೀಡಲು ಪೊಲೀಸರಿಗೆ ಹೇಳಿದ್ದೇನೆ,ಪ್ರತಿ ತಿಂಗಳು ಪೊಲೀಸರಿಗೆ ಭೇಟಿ ನೀಡಲು ಹೇಳಿದ್ದೇನೆ, ಆಂಟಿ ನಾರ್ಕೋಟಿಕ್ಸ್ ಟಾಸ್ಕ್ ಫೋರ್ಸ್ ಮಾಡಿದ್ದೇವೆ ಎಂದು ಹೇಳಿದರು.
ಜೈಲಿನಲ್ಲಿ ಉಗ್ರರು ಐಟಂ ಸಾಂಗ್ ನೋಡ್ತಿದ್ದಾರೆ, ಜೈಲಿನಲ್ಲಿ ಉಗ್ರರು ಉಗ್ರ ಚಟುವಟಿಕೆ ಭಾಗಿಯಾಗ್ತಿದ್ದಾರೆ, ಇದು ಗೃಹ ಸಚಿವರು ಫೇಲ್ಯೂರ್ ಆಗಿದ್ದಾರೆ, ರನ್ಯರಾವ್ ಆಪ್ತನಿಗೆ ಬಿಂದಾಸ್ ಲೈಫ್ ಎಂಬ ವರದಿಗಳು ಬಂದಿವೆ,ಮೊಬೈಲ್ ಕೊಡಲು ಸಹಕರಿಸಿದವರನ್ನು ಉಗ್ರರು ಎಂದೇ ಪರಿಗಣಿಸಬೇಕು ಎಂದು ಬಿಜೆಪಿ ಸದಸ್ಯ ಕಿಶೋರ್ ಕುಮಾರ್ ಒತ್ತಾಯಿಸಿದ್ರು, ಕಿಶೋರ್ ಕುಮಾರ್ ಪ್ರಶ್ನೆ ಕೇಳುವಾಗ ಡಿಸಿಎಂ ಡಿಕೆಶಿ ಹೆಸರು ಪ್ರಸ್ತಾಪವಾಯ್ತು, ಆಗ ಡಿಸಿಎಂ ಹೆಸರು ಯಾಕೆ ಪ್ರಸ್ತಾಪ ಮಾಡಿದ್ರಿ ಎಂದು ಪರಮೇಶ್ವರ್ ಪ್ರಶ್ನಿಸಿದ್ರು, ಕೂಡಲೇ ಎದ್ದು ನಿಂತ ಡಿಸಿಎಂ ಡಿ.ಕೆ ಶಿವಕುಮಾರ್ ಜೈಲಿನಿಂದ ಯಾವ ಕಾಲ್ ನನಗೆ ಬಂದಿಲ್ಲ, ನಾನು ಕಾಲ್ ಯಾರಿಗೂ ಮಾಡಿಲ್ಲ, ನಾನು ಜೈಲು ಸಚಿವನಾಗಿದ್ದೆ , ಜೈಲಲ್ಲೂ ಇದ್ದೆ ಜೈಲಲ್ಲಿ ಏನ್ ನಡಿತಿದೆ ಅಂತಾ ಗೊತ್ತಿದೆ ಎಂದು ತಿರುಗೇಟು ಕೊಟ್ರು.
ಇನ್ನು ಶಿರಸಿ ಹುಬ್ಬಳ್ಳಿ ನಡುವೆ ಸಾರಿಗೆ ಬಸ್ ಸಂಚಾರದಲ್ಲಿ ವಿಳಂಭ ಕುರಿತು ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಭಾರತಿಶೆಟ್ಟಿ ಸಾರಿಗೆ ಸಚಿವರ ಗಮನ ಸೆಳೆದರು, ಇದಕ್ಕೆ ಉತ್ತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ,ನಾವು ಅಧಿಕಾರಕ್ಕೆ ಬರುವುದಕ್ಕೆ ಮುಂಚೆ ನಾಲ್ಕು ಸಾವಿರ ಕೋಟಿ ಸಾಲ ಇತ್ತು, ಸಾರಿಗೆ ಇಲಾಖೆಯಲ್ಲಿ 4 ಸಾವಿರ ಕೋಟಿ ಸಾಲ ಇತ್ತು, ವೇತನ ಬಾಕಿಯನ್ನು ಉಳಿಸಿ ಹೋಗಿದ್ದರು, ಸಧ್ಯ ಬಸ್ ಗಳು 1,84 ಲಕ್ಷ ಟ್ರಿಪ್ ಓಡುತ್ತಿವೆ, ಒಂದು ಟ್ರಿಪ್ ಹೀಗೆ ವ್ಯತ್ಯಾಸ ಆಗಿರಬಹುದು,ನಾವು 9000 ಹುದ್ದೆ ನೇಮಿಕಾತಿ ಮಾಡಿದ್ದೇವೆ,2000 ಕೋಟಿ ರೂ ಸರಕಾರ ಸಾಲವಾಗಿ ಕೊಟ್ಟಿದೆ, ಸಾಲವನ್ನು ಸರಕಾರವೇ ತೀರಿಸಲಿದೆ, ಶಕ್ತಿ ಯೋಜನೆಯಲ್ಲಿ 625 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ, ಇದರಿಂದ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ,ಶಕ್ತಿಯೋಜನೆಯ ಬಾಕಿ ಹಣ ಸರಕಾರದಿಂದ ಬರಬೇಕು,ಮುಂದಿನ ಬಜೆಟ್ ನಲ್ಲಿ ಸಿಎಂ ಕೊಡುತ್ತಾರೆ, ಇಲಾಖೆಯಲ್ಲಿ ಯಾವ ಸಮಸ್ಯೆಯೂ ಇಲ್ಲ ಅಂತ ಹೇಳಿದ್ರು.
ಇದೇ ವೆಳೆ ಸಾರಿಗೆ ನೌಕರರ ವೇತನ ಪರಿಷ್ಕರಣೆ ಸಂಬಂಧ ಸಿ.ಟಿ.ರವಿ ವಿಷಯ ಪ್ರಸ್ತಾಪಿಸಿದ್ರು, ಸಿ.ಟಿ.ರವಿ ಪ್ರಶ್ನೆಗೆ ಉತ್ತಿರಿಸಿದ ರಾಮಲಿಂಗಾರೆಡ್ಡಿ,ನಾಲ್ಕು ನಿಗಮಗಳಲ್ಲಿ ಒಂದು ಲಕ್ಷ ಸಿಬ್ಬಂದಿಗಳು ಇದ್ದಾರೆ, ಯೂನಿಯನ್‌ಗಳು ಇವೆ,ಕ್ರಿಯಾ ಸಮಿತಿಯೂ ಇದೆ, ನಾಲ್ಕು ವರ್ಷಕ್ಕೆ ಒಮ್ಮೆ ವೇತನ ಪರಿಷ್ಕರಣೆ ಆಗುತ್ತೆ, ಕೊರೊನಾ ಸಮಯದಲ್ಲಿ ವೇತನ ಪರಿಷ್ಕರಣೆ ಆಗಿರಲಿಲ್ಲ, 2023ಕ್ಕೆ ವೇತನ ಪರಿಷ್ಕರಣೆ ಆಗಿತ್ತು, ವೇತನ ಪರಿಷ್ಕರಣೆ ಆದೇಶದಲ್ಲೂ ಗೊಂದಲ ಇತ್ತು, ಬಜೆಟ್ ನಲ್ಲೂ ಹಣ ಕೊಟ್ಟಿರಲಿಲ್ಲ, ಈ ಕುರಿತು ಯೂನಿಯನ್ ಗಳು ಹೋರಾಟ ನಡೆಸಿವೆ, ನಾವು ಸಭೆ ಮಾಡಿದ್ದೇವೆ, ಸೆಷನ್ ನಲ್ಲಿ ಮುಗಿದ ಬಳಿಕ ಸಿಎಂ ಜೊತೆ ಚರ್ಚಿಸುತ್ತೇವೆ ಎಂದು ಭರವಸೆ ನೀಡಿದರು.
ಈ ನಡುವೆ ಕಂದಾಯ ಸಚಿವ ಕೃಷ್ಣಬೈರೇಗೌಡ ವಿರುದ್ದ ಕೇಳಿ ಬಂದಿರುವ ಭೂ ಕಬಳಿಕೆ ಆರೋಪ ಸಂಬಂಧ ಚರ್ಚೆಗೆ ಅವಕಾಶ ಕೊಡಿ ಎಂದು ಬಿಜೆಪಿ ಸದಸ್ಯ ಕೇಶವ್ ಪ್ರಸಾದ್ ಮನವಿ ಮಾಡಿದ್ರು, ಇದಕ್ಕೆ ದನಿಗೂಡಿಸಿದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಇದೊಂದು ಗಂಭೀರ ಪ್ರಕರಣ ಚರ್ಚೆಗೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ರು, ಇದಕ್ಕೆ ಯಾವ ನಿಯಮದಡಿ ಚರ್ಚೆಗೆ ಅವಕಾಶ ಕೊಡಬೇಕೆಂದು ಪ್ರಶ್ನಿಸಿದ ಸಭಾಪತಿಗೆ, ಅತಿ ಜರೂರು ಅಡಿಯಲ್ಲಿ ಅವಕಾಶ ಕೊಡುವಂತೆ ಮನವಿ ಮಾಡಿದ್ರು, ಲಿಖಿತ ರೂಪದಲ್ಲಿ ಕೊಡಿ..ಪರಿಶೀಲಿಸುವೆ ಎಂದು ಚರ್ಚೆ ಅವಕಾಶ ನೀಡಲಿಲ್ಲ.
ಕರ್ನಾಟಕ ಧನವಿನಿಯೋಗ ವಿಧೇಯಕ, ಬೆಂಗಳೂರು ಮಹಾನಗರ ಭೂಸಾರಿಗೆ ತಿದ್ದುಪಡಿ ವಿಧೇಯಕ, ಬಾಂಬೆ ಸಾರ್ವಜನಿಕ ನ್ಯಾಸ ತಿದ್ದುಪಡಿ ವಿಧೇಯಕ,ರಸ್ತೆ ಸುರಕ್ಷತಾ ತಿದ್ದುಪಡಿ ವಿಧೇಯಕ,ಔಷಧ ಮತ್ತು ಪ್ರಸಾಧನ ಸಾಮಗ್ರಿ ತಿದ್ದುಪಡಿ ವಿಧೇಯಕ ಸೇರಿದಂತೆ ಹಲವು ವಿಧೇಯಕಗಳು ಮಂಡನೆಯಾಗಿ ಅಂಗೀಕಾರಗೊಂಡವು.

