
ಮಾಲಗತ್ತಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ – ಪುಸ್ತಕ ಕಾಣಿಕೆ ನೀಡಿ ಓದು ಹವ್ಯಾಸಕ್ಕೆ ಉತ್ತೇಜನ
ByUk DESK2
April 14, 2026
1
ಮಾಲಗತ್ತಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ – ಪುಸ್ತಕ ಕಾಣಿಕೆ ನೀಡಿ ಓದು ಹವ್ಯಾಸಕ್ಕೆ ಉತ್ತೇಜನ ಮಾಲಗತ್ತಿ, ಸುರಪುರ ತಾಲ್ಲೂಕು, ಯಾದಗಿರಿ ಜಿಲ್ಲೆ:
ಗ್ರಾಮ ಪಂಚಾಯಿತಿ ಕಾರ್ಯಾಲಯ ಹಾಗೂ ಅರಿವು ಕೇಂದ್ರ ಗ್ರಾಮ ಪಂಚಾಯತಿ ಗ್ರಂಥಾಲಯ ಮಾಲಗತ್ತಿ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ಭಾವಪೂರ್ಣವಾಗಿ ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಜೊತೆಗೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಮತ್ತು ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮದಲ್ಲಿ ಉತ್ತಮ ಪುಸ್ತಕಗಳನ್ನು ಕಿರು ಕಾಣಿಕೆಯಾಗಿ ನೀಡಿ ಸನ್ಮಾನಿಸಲಾಯಿತು.
ಮಾಲಗತ್ತಿ ಗ್ರಾಮೀಣ ಪ್ರದೇಶದ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ತಾರಾ (ತಂದೆ ಭೀಮಣ್ಣ ತಿಪ್ಪನಟಗಿ) ಅವರು 95.86% ಅಂಕಗಳನ್ನು ಪಡೆದು ಸುರಪುರ ತಾಲ್ಲೂಕಿಗೆ ಪ್ರಥಮ ಸ್ಥಾನ ಹಾಗೂ ಯಾದಗಿರಿ ಜಿಲ್ಲೆಗೆ 5ನೇ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿದರು. ಇದೇ ವೇಳೆ ಅಮೃತ ತಿಪ್ಪನಟಗಿ (86%) ಮತ್ತು ಎಲ್ಲಮ್ಮ ಮಾಲಗತ್ತಿ (76.66%) ಕೂಡ ಉತ್ತಮ ಅಂಕಗಳನ್ನು ಗಳಿಸಿ ಕಾಲೇಜು ಹಾಗೂ ಊರಿಗೆ ಕೀರ್ತಿ ತಂದಿದ್ದಾರೆ.
ಇನ್ನೂ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಮಡಿವಾಳಮ್ಮ (ತಂದೆ ಬಾಲದಂಡಪ್ಪ ದೇಸಾಯಿ) ಅವರು 92% ಅಂಕಗಳನ್ನು ಪಡೆದರೆ, ವಿಜ್ಞಾನ ವಿಭಾಗದಲ್ಲಿ ಮಾಯಾವತಿ (ತಂದೆ ಬಾಬುರಾವ್ ಕಂಬಾರ್) ಅವರು 94% ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಈ ಎಲ್ಲ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೈಬೂಬ್ ಪಟೇಲ್, ಅರಿವು ಕೇಂದ್ರ ಗ್ರಂಥಾಲಯ ಮೇಲ್ವಿಚಾರಕ ವಿಜಯಕುಮಾರ ದರ್ಶನಾಪುರ, ಕರವಸೂಲಿಗಾರ ಗೊಲ್ಲಾಳಪ್ಪ ದೊರೆ ಸೇರಿದಂತೆ ಸಿಬ್ಬಂದಿ ವರ್ಗದವರು ಸನ್ಮಾನಿಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರು, ಪಾಲಕರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ವೇಳೆ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಲಾಯಿತು. ಒಟ್ಟಾರೆ, ಈ ಸನ್ಮಾನ ಕಾರ್ಯಕ್ರಮ ವಿದ್ಯಾರ್ಥಿಗಳ ಸಾಧನೆಯನ್ನು ಗೌರವಿಸುವುದರ ಜೊತೆಗೆ, ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.
