ಕಲಬುರಗಿ: ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸಿಎಆರ್ (CAR) ಪೊಲೀಸ್ ಪೇದೆಯೊಬ್ಬರು ಸರ್ಕಾರಿ ಪೊಲೀಸ್ ವಾಹನದಲ್ಲೇ ಸೇವಾ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಮಂಗಳವಾರ ರಾತ್ರಿ ನಗರದ ಜಗತ್ ವೃತ್ತದ ಬಳಿ ನಡೆದಿದೆ.
ಮೃತರನ್ನು ಶಿವಕುಮಾರ್ ಮಾವನೂರ (32) ಎಂದು ಗುರುತಿಸಲಾಗಿದೆ. ಅವರು ಜೇವರ್ಗಿ ತಾಲೂಕಿನ ಮಾವನೂರ ಗ್ರಾಮದ ನಿವಾಸಿಯಾಗಿದ್ದು, 2016ನೇ ಬ್ಯಾಚ್‌ನ ಸಿಎಆರ್ ಪೊಲೀಸ್ ಪೇದೆಯಾಗಿದ್ದರು. ಕರ್ತವ್ಯಕ್ಕಾಗಿ ನೀಡಲಾಗಿದ್ದ 7.62 ಸೇವಾ ರೈಫಲ್‌ನಿಂದ ಗುಂಡು ಹಾರಿಸಿಕೊಂಡಿರುವುದಾಗಿ ಪ್ರಾಥಮಿಕ ಮಾಹಿತಿ ತಿಳಿಸಿದೆ.
ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನಿಂದ ಕಲಬುರಗಿಗೆ ವರ್ಗಾವಣೆಗೊಂಡು ಬಂದಿದ್ದ ಅವರು, ನಗರದಲ್ಲಿರುವ ತಮ್ಮ ನಿವಾಸದಿಂದ ಕರ್ತವ್ಯಕ್ಕೆ ಆಗಮಿಸುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಡಿಸಿಪಿಗಳಾದ ಶಾಲೂ ಹಾಗೂ ಪ್ರವೀಣ ನಾಯಕ, ಎಸಿಪಿ ಶರಣಪ್ಪ ಸುಬೇದಾರ, ಪಿಐ ಮಹಾಂತೇಶ ಪಾಟೀಲ್, ಆರ್‌ಪಿಐ ಮಹಾದೇವ ಪಾಟೀಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಕರಣವು ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ.
ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರು, “ಪ್ರಾಥಮಿಕ ತನಿಖೆಯಲ್ಲಿ ವೈಯಕ್ತಿಕ ಕಾರಣದಿಂದ ಈ ಘಟನೆ ಸಂಭವಿಸಿರುವ ಸಾಧ್ಯತೆ ಕಂಡುಬಂದಿದೆ. ಕುಟುಂಬ ಸದಸ್ಯರು ನೀಡುವ ದೂರಿನ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

