ಅರಿವು ಕೇಂದ್ರ ಗ್ರಂಥಾಲಯದ ಓದುಗ ಭರತ್‌ಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.83.04 ಸಾಧನೆ
ಜೈನಾಪುರ ಮೂಲದ ವಿದ್ಯಾರ್ಥಿ ಭರತ್ ತಂದೆ ಲೋಹಿತಾಶ್ವ ಅವರು 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 519 ಅಂಕಗಳನ್ನು ಪಡೆದು ಶೇ.83.04 ಫಲಿತಾಂಶ ದಾಖಲಿಸಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ಭರತ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಜೈನಾಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ಣಗೊಳಿಸಿ, ನಂತರ ಮಾಲಗತ್ತಿ ಸರಕಾರಿ ಪ್ರೌಢಶಾಲೆಯಲ್ಲಿ ಎಂಟನೇ ಹಾಗೂ ಒಂಬತ್ತನೇ ತರಗತಿಯನ್ನು ವ್ಯಾಸಂಗ ಮಾಡಿದರು. ಈ ಅವಧಿಯಲ್ಲಿ ಅವರು ಅರಿವು ಕೇಂದ್ರ ಗ್ರಾಮ ಪಂಚಾಯತಿ ಗ್ರಂಥಾಲಯದಲ್ಲಿ ಸದಸ್ಯತ್ವ ಪಡೆದುಕೊಂಡು ನಿರಂತರ ಓದುಗರಾಗಿ ಗುರುತಿಸಿಕೊಂಡಿದ್ದರು.
ಗ್ರಂಥಾಲಯದಲ್ಲಿದ್ದ ಡಿಜೆ ವಿಕಾಸನ ಶಿಕ್ಷಣ ಪೀಡಿಯಾ ಆಪ್‌ನ್ನು ಸದುಪಯೋಗಪಡಿಸಿಕೊಂಡು ಪಾಠಗಳಲ್ಲಿ ಇರುವ ಕೊರತೆಗಳನ್ನು ಸರಿಪಡಿಸಿಕೊಂಡು ಪ್ರತಿದಿನ ಅಭ್ಯಾಸ ನಡೆಸುತ್ತಿದ್ದರು. ಬಳಿಕ ಹತ್ತನೇ ತರಗತಿಗಾಗಿ ಕೊಡಗನೂರು ಗ್ರಾಮದ ಜೆ.ಎಸ್.ಎಸ್ ಪ್ರೌಢಶಾಲೆಗೆ ಸೇರಿದರು.
ಶಾಲೆ ಬದಲಾಗಿದ್ದರೂ ಸಹ ಭರತ್ ಅವರು ಬಿಡುವಿನ ವೇಳೆಯಲ್ಲಿ ಅರಿವು ಕೇಂದ್ರ ಗ್ರಾಮ ಪಂಚಾಯತಿ ಗ್ರಂಥಾಲಯಕ್ಕೆ ಆಗಮಿಸಿ ಪರೀಕ್ಷಾ ಪೂರ್ವ ಸಿದ್ಧತೆ ನಡೆಸುತ್ತಿದ್ದರು. ಗ್ರಂಥಾಲಯದಲ್ಲಿರುವ ಡಿಜೆ ವಿಕಾಸನ ಶಿಕ್ಷಣ ಪೀಡಿಯಾ ಬಳಸಿ ನಿರಂತರ ಅಭ್ಯಾಸ ಮಾಡಿದ ಪರಿಣಾಮ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಭರತ್ ಅವರ ಈ ಸಾಧನೆಯಿಂದ ಅರಿವು ಕೇಂದ್ರ ಗ್ರಾಮ ಪಂಚಾಯತಿ ಗ್ರಂಥಾಲಯ ಮಾಲಗತ್ತಿ ಹಾಗೂ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯ ಕೀರ್ತಿ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಅರಿವು ಕೇಂದ್ರ ಗ್ರಾಮ ಪಂಚಾಯತಿ ಗ್ರಂಥಾಲಯದ ಮೇಲ್ವಿಚಾರಕರು, ಮಾಲಗತ್ತಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿಯ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಊರಿನ ಗಣ್ಯರು, ಪೋಷಕರು ಹಾಗೂ ಸಾರ್ವಜನಿಕರು ಭರತ್ ಅವರಿಗೆ ಅಭಿನಂದನೆ ಸಲ್ಲಿಸಿ ಮುಂದಿನ ವಿದ್ಯಾಭ್ಯಾಸದಲ್ಲಿಯೂ ಇನ್ನಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.

