14.7 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ

ಸಾಮಾಜಿಕ ನ್ಯಾಯ, ಸಂವಿಧಾನಕ್ಕೆ ಬದ್ಧವಾಗಿರುವ ಪಕ್ಷಕ್ಕೆ ನಿಮ್ಮ ಬೆಂಬಲವಿರಲಿ – ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಇತಿಹಾಸ ಅರಿಯದವರಿಂದ ಭವಿಷ್ಯ ನಿರ್ಮಾಣ ಸಾಧ್ಯವಿಲ್ಲ

ಮೀಸಲಾತಿ ಎನ್ನುವುದು ಭಿಕ್ಷೆಯಲ್ಲ, ಅದು ಶೋಷಿತರ ಹಕ್ಕು – ಬಾಬಾ ಸಾಹೇಬರ ಮಾತು ಉಲ್ಲೇಖಿಸಿದ ಮಾಜಿ ಸಿಎಂ

ಸಾಮಾಜಿಕ ನ್ಯಾಯ ದಿನಾಚರಣೆ ಮತ್ತು ಮಂಡಲ್‌ ವರದಿ ಜಾರಿಯ 36ನೇ ವಾರ್ಷಿಕೋತ್ಸವದಲ್ಲಿ ಸಿದ್ದರಾಮಯ್ಯನವರ ಮಾತು

ಬೆಂಗಳೂರು, ಆಗಸ್ಟ್‌ 07 : ಸಮಾಜದಲ್ಲಿ ಅಸಮಾನತೆ, ಜಾತಿ ವ್ಯವಸ್ಥೆ ಇರುವವರೆಗೆ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಕೂಡ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಸಿಗಲೇಬೇಕು ಎಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಪ್ರತಿಪಾದಿಸಿದರು.

ಇಂದು ಅವರು ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಿದ್ದ ಸಾಮಾಜಿಕ ನ್ಯಾಯ ದಿನಾಚರಣೆ ಮತ್ತು ಮಂಡಲ್ ವರದಿ ಜಾರಿಯ 36ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ, ಬಳಿಕ ಮಾತನಾಡಿದರು, ರವಿವರ್ಮ ಕುಮಾರ್‌ ಅವರು ಕೆಲವು ದಿನಗಳ ಹಿಂದೆ ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದರು. ಇಂದು ಅತ್ಯಂತ ಸಂತೋಷದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿದ್ದೇನೆಂದು ಹರ್ಷ ವ್ಯಕ್ತಪಡಿಸಿದರು.

ರವಿವರ್ಮ ಕುಮಾರ್‌ ಅವರು ಸಾಮಾಜಿಕ ನ್ಯಾಯ, ಮೀಸಲಾತಿ ಇತಿಹಾಸದ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ಮೀಸಲಾತಿ ಬಗ್ಗೆ ಅವರಿಗೆ ಬಹಳ ಜ್ಞಾನವಿದೆ. ಮೊದಲನೆಯದಾಗಿ, ಈ ದೇಶದಲ್ಲಿ ಮೀಸಲಾತಿ ಜಾರಿಗೆ ಅನೇಕ ತೊಡಕುಗಳಿವೆ. ಸಮಾಜದಲ್ಲಿ ಸಮಾನತೆಯನ್ನು ತರಲು ಮನುವಾದಿಗಳು ಅಡ್ಡಿಪಡಿಸುತ್ತಿದ್ದಾರೆ. ಎಲ್ಲರಿಗೂ ಸಮಾನ ಅವಕಾಶಗಳು ಸಿಕ್ಕಾಗ ಸಮ ಸಮಾಜ ನಿರ್ಮಾಣ ಸಾಧ್ಯ ಎಂದ ಅವರು, ಅಸಮಾನತೆ ಇರುವ ಈ ಸಮಾಜದಲ್ಲಿ ಸಮಾನತೆ ಬರಲೇಬೇಕು. ಎಲ್ಲಿಯವರೆಗೆ ಅಸಮಾನತೆ ಮುಂದುವರೆಯುತ್ತದೆಯೋ, ಅಲ್ಲಿಯವರೆಗೆ ಮೀಸಲಾತಿ ಇರಲೇಬೇಕು. ಮೀಸಲಾತಿ ಎನ್ನುವುದು ಭಿಕ್ಷೆಯಲ್ಲ, ಅದು ಶೋಷಿತರ ಹಕ್ಕು ಎಂಬುದಾಗಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಮಾತನ್ನು ಈ ವೇಳೆ ಉಲ್ಲೇಖಿಸಿದರು.

ಅಸಮಾನತೆ ಮುಂದುವರಿದರೆ ಸಮ ಸಮಾಜ ನಿರ್ಮಾಣ ಮಾಡುವುದಾದರೂ ಹೇಗೆ? ಅಸಮಾನತೆ ಎಲ್ಲಿಯವರೆಗೆ ಮುಂದುವರೆಯುತ್ತದೆಯೋ, ಅಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆ. ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅದಕ್ಕಾಗಿ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ, ರಾಜಕೀಯ ನ್ಯಾಯ ಸಿಗಲೇಬೇಕು. ಇದು ಸಿಗದೇ ಹೋದರೆ, ಸಮಾನತೆ ಬರುವುದಿಲ್ಲ ಎಂದು ಅಂಬೇಡ್ಕರ್‌ ಅವರು ಹೇಳಿದ್ದಾರೆ. ಆದ್ದರಿಂದ ಅಸಮಾನತೆಯು ತೊಲಗಿ ಸಮಾನತೆಯ ಸಮಾಜ ಸೃಷ್ಟಿಯಾಗಲಿ ಎನ್ನುವುದು ನನ್ನ ಆಶಯ ಎಂದರು.

ಮುಂದುವರೆದು, ಮೀಸಲಾತಿ ಎನ್ನುವುದು ಸಾಮಾಜಿಕ ನ್ಯಾಯದ ಒಂದು ಭಾಗವಷ್ಟೇ. ಮೀಸಲಾತಿ ಇಲ್ಲದೆಯೇ ಸಮಾನತೆ ಬರಲು ಸಾಧ್ಯವಿಲ್ಲ. ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು. ಸಾವಿರಾರು ವರ್ಷಗಳವರೆಗೆ ಶೂದ್ರರು ಶಿಕ್ಷಣದಿಂದಲೇ ವಂಚಿತರಾಗಿದ್ದರು. ನಾವೆಲ್ಲರೂ ಕೂಡ ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು. ಯಾರು ಇತಿಹಾಸವನ್ನು ಅರಿಯುವುದಿಲ್ಲವೋ, ಅವರು ಭವಿಷ್ಯ ನಿರ್ಮಾಣ ಮಾಡಲು ಸಾಧ್ಯವಿಲ್ಲ ಎಂದು ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು ಹೇಳಿದ್ದರು. ಇತಿಹಾಸ ತಿಳಿದುಕೊಳ್ಳದೇ ಹೋದರೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂದು ಹೇಳಿದರು.

ಆಶ್ಚರ್ಯ ವಿಚಾರ ಏನೆಂದರೆ, ಶೋಷಿತ ವರ್ಗದವರು ಯಾರೂ ಹೋರಾಟ ಮಾಡಿದವರಲ್ಲ. ಇದಕ್ಕೆ ಬಡತನ, ಅನಕ್ಷರತೆ, ಸಂಘಟನೆ ಕೊರತೆ ಇರಬಹುದು. ಮೀಸಲಾತಿ ಬಗ್ಗೆ ಕಾಂತರಾಜು ವರದಿ ಕೊಟ್ಟರು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಮಧುಸೂದನ್‌ ನಾಯ್ಕ್‌ ಅವರು ವರದಿಯನ್ನು ಕೊಟ್ಟರು. ನಾನು ಮುಖ್ಯಮಂತ್ರಿಯಾಗಿದ್ದಾಗ ಸ್ವೀಕಾರ ಮಾಡಿದ್ದೇನೆ. ಜಾರಿ ಮಾಡಲು ನೀವೆಲ್ಲ ಹೋರಾಟ ಮಾಡಿ ಎಂದರು.

ನಾನು ಮುಖ್ಯಮಂತ್ರಿಯಾದ ಬಳಿಕ ಅನ್ನಭಾಗ್ಯ ಕಾರ್ಯಕ್ರಮವನ್ನು ಜಾರಿ ಮಾಡಿದೆ, ಗ್ಯಾರಂಟಿ ಯೋಜನೆಗಳನ್ನು ಕೊಟ್ಟೆ. ಅದನ್ನು ವಿರೋಧಿಸುತ್ತಿರುವವರು ಬಹಳ ಜನ ಇದ್ದಾರೆ. ನಾನು ಜಾರಿ ಮಾಡುವಾಗಲೇ ಯೋಚನೆ ಮಾಡಿ ಎಲ್ಲಾ ಜಾತಿ, ಬಡವರಿಗೂ ಗ್ಯಾರಂಟಿಗಳನ್ನು ತಲುಪಿಸುವ ಕೆಲಸ ಮಾಡಿದ್ದೇನೆ. ಹೆಣ್ಣುಮಕ್ಕಳು ಶಕ್ತಿ ಯೋಜನೆಯನ್ನು ಉಪಯೋಗಿಸಿ, ಸ್ವತಂತ್ರವಾಗಿ ಬಸ್‌ಗಳಲ್ಲಿ ಓಡಾಡುವುದನ್ನು ನೋಡುವಾಗ ಸಂತೃಪ್ತ ಭಾವನೆ ಮೂಡುತ್ತಿರುವುದಾಗಿ ಹರ್ಷ ವ್ಯಕ್ತಪಡಿಸಿದರು.

ಮೀಸಲಾತಿ ಶೇ.50 ಇರಬೇಕು. ಪರಿಶಿಷ್ಟ ಜಾತಿ/ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಶೇ.56 ಮಾಡಿದ್ದಕ್ಕೆ ತಡೆ ಒಡ್ಡಿದ್ದಾರೆ. 56 ತನಕ ಇರಬಾರದು ಎಂದಿದ್ದಾರೆ. ಪರಿಶಿಷ್ಟ ಜಾತಿ/ ಪಂಗಡದವರಿಗೆ ಹೀಗೆ ಆಗಿರುವಾಗ, ಇನ್ನೂ ಓಬಿಸಿ ಅವರ ಕಥೆಯೇನು? ಹಾಗಾಗಿ ನಾವು ಸಂಘಟಿತರಾಗಿ ಹೋರಾಟ ಮಾಡದೇ ಹೋದರೆ ನ್ಯಾಯ ಪಡೆದುಕೊಳ್ಳಲು ಸಾಧ್ಯವಿಲ್ಲ. ಮೀಸಲಾತಿ ನಮ್ಮ ಜನ್ಮಸಿದ್ಧ ಹಕ್ಕು, ಸಂವಿಧಾನಬದ್ಧವಾದ ಹಕ್ಕು. ಇದನ್ನು ಪಡೆದುಕೊಳ್ಳುವ ಕೆಲಸವನ್ನು ಮಾಡಲೇಬೇಕು ಎಂದರು.

ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯನ್ನು ನಾನು 2013ರಲ್ಲಿ ಜಾರಿ ಮಾಡಿದೆ. ದೇಶದಲ್ಲಿಯೂ ಎಲ್ಲಿಯೂ ಈ ಕಾಯ್ದೆ ಇಲ್ಲ. ನಮ್ಮ ಸರ್ಕಾರ ಈ ಕಾಯ್ದೆ ಮೂಲಕ ಪ.ಜಾತಿ/ಪ.ಪಂಗಡದ ಯವಕರಿಗೆ ಪ್ರತಿ ವರ್ಷ 40 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡುತ್ತಿದೆ. ಈ ಕಾಯ್ದೆಯನ್ನು ಕೇಂದ್ರ ಇನ್ನೂ ಜಾರಿ ಮಾಡಿಲ್ಲ. ಈ ಬಗ್ಗೆ ಯಾರೂ ಪ್ರಶ್ನಿಸುವುದಿಲ್ಲ. ನಮ್ಮಲ್ಲಿ ಸಂಘಟನೆ ಮತ್ತು ತಿಳುವಳಿಕೆಯ ಕೊರತೆ ಇದೆ. ಈ ದೇಶದ ಪ್ರಧಾನಿಯನ್ನು ಹಾಡಿ ಹೊಗಳುವುದನ್ನು ನಾವು ನೋಡಿದ್ದೇವೆ. ಯಾವ ಪಕ್ಷ ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಪರವಿದೆಯೋ ಅದಕ್ಕೆ ನಿಮ್ಮ ಬೆಂಬಲವಿರಲಿ. ನೀವೆಲ್ಲಾ ಸಂಘಟಿತರಾಗಿ ಇನ್ನೂ ಅನೇಕ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles