16 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಉದ್ಯಮ–ಸರ್ಕಾರ–ಶೈಕ್ಷಣಿಕ ಸಂಸ್ಥೆಗಳ ಸಹಭಾಗಿತ್ವದಿಂದ ಭಾರತವನ್ನು AI ಆಧಾರಿತ ಉತ್ಪನ್ನ ರಾಷ್ಟ್ರವನ್ನಾಗಿ ರೂಪಿಸೋಣ: ಸಚಿವ ಪ್ರಿಯಾಂಕ್ ಖರ್ಗೆಭಾರತವನ್ನು ಕೃತಕ ಬುದ್ಧಿಮತ್ತೆ (AI) ಆಧಾರಿತ ಜಾಗತಿಕ ಉತ್ಪನ್ನ ರಾಷ್ಟ್ರವನ್ನಾಗಿ ರೂಪಿಸಲು ಸರ್ಕಾರ, ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದು ರಾಜ್ಯದ ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಅವರು ಕರೆ ನೀಡಿದರು.

ಅವರು ಇಂದು ಬೆಂಗಳೂರಿನಲ್ಲಿ ನಡೆದ 22ನೇ ಸಿಐಐ ಇನೋವೇಷನ್ ಸಮ್ಮೇಳನ –ಇನ್ವರ್ಜ್ (Innoverge) 2026ರ ವಿಶೇಷ ಅಧಿವೇಶನದಲ್ಲಿ ‘ನಾವೀನ್ಯತೆ, ವಿಶ್ವಾಸ ಮತ್ತು ತಂತ್ರಜ್ಞಾನದ ಆಧಾರದಲ್ಲಿ AI-ಚಾಲಿತ ಉತ್ಪನ್ನ ರಾಷ್ಟ್ರವಾಗಿ ಭಾರತದ ಪರಿವರ್ತನೆ” (Transforming India into an AI-led Product Nation – Innovation, Trust & Technology) ಎಂಬ ವಿಷಯ ಕುರಿತು ಮಾತನಾಡಿದರು.

ಕರ್ನಾಟಕವು ದೇಶದ ಮಾಹಿತಿ ತಂತ್ರಜ್ಞಾನ ಹಾಗೂ ನವೋದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಮುಂದಿನ ಹಂತದ ಬೆಳವಣಿಗೆಯು ಕೇವಲ ತಂತ್ರಜ್ಞಾನ ಅಭಿವೃದ್ಧಿಗೆ ಸೀಮಿತವಾಗಿರದೆ, ಪ್ರತಿಭೆ, ಸಂಶೋಧನೆ, ಉದ್ಯಮಶೀಲತೆ, ಜಾಗತಿಕ ಸಹಭಾಗಿತ್ವ ಮತ್ತು ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆಯ ಬಳಕೆಯ ಮೇಲೆ ಅವಲಂಬಿತವಾಗಿರಲಿದೆ ಎಂದು ಸಚಿವರು ಹೇಳಿದರು.

“ಭಾರತವನ್ನು AI ಆಧಾರಿತ ಉತ್ಪನ್ನ ರಾಷ್ಟ್ರವನ್ನಾಗಿ ರೂಪಿಸಲು ಸರ್ಕಾರ, ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳು ಪ್ರತ್ಯೇಕವಾಗಿ ಕೆಲಸ ಮಾಡುವ ಕಾಲ ಮುಗಿದಿದೆ. ಕರ್ನಾಟಕವು ಆರಂಭದಿಂದಲೂ ಸಹಭಾಗಿತ್ವದ ಮಾದರಿಯಲ್ಲಿ ನವೋದ್ಯಮವನ್ನು ಉತ್ತೇಜಿಸುತ್ತಿದೆ. ಸರ್ಕಾರದ ಪಾತ್ರ ಕೇವಲ ನೀತಿಗಳನ್ನು ರೂಪಿಸುವುದಲ್ಲ; ಉದ್ಯಮ, ಸಂಶೋಧಕರು ಮತ್ತು ನವೋದ್ಯಮಿಗಳೊಂದಿಗೆ ಕೈಜೋಡಿಸಿ ಪ್ರತಿಭೆ, ಸಂಶೋಧನೆ, ಸ್ಟಾರ್ಟ್‌ಅಪ್‌ಗಳು ಹಾಗೂ ಜವಾಬ್ದಾರಿಯುತ AI ಬೆಳವಣಿಗೆಗೆ ಅನುಕೂಲಕರ ಪರಿಸರ ನಿರ್ಮಿಸುವುದಾಗಿದೆ. ಕರ್ನಾಟಕದಲ್ಲಿ ರೂಪುಗೊಳ್ಳುವ ತಂತ್ರಜ್ಞಾನಗಳು ವಿಶ್ವದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಮಟ್ಟಕ್ಕೆ ಬೆಳೆಯಬೇಕು,” ಎಂದು ಅವರು ತಿಳಿಸಿದರು.

ರಾಜ್ಯದ AI ಬೆಳವಣಿಗೆಯ ಮುಂದಿನ ಹಂತದಲ್ಲಿ ಉದ್ಯಮ ಮತ್ತು ಸರ್ಕಾರದ ಸಹಭಾಗಿತ್ವವು ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿದ ಸಚಿವರು, ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ಜಾಗತಿಕ ಮಟ್ಟದ AI ಕೌಶಲ್ಯ ಹೊಂದಿದ ಮಾನವ ಸಂಪನ್ಮೂಲವನ್ನು ರೂಪಿಸುವುದು, ಅಂತರರಾಷ್ಟ್ರೀಯ ನವೋದ್ಯಮ ಸಹಭಾಗಿತ್ವಗಳನ್ನು ಇನ್ನಷ್ಟು ವಿಸ್ತರಿಸುವುದು, ಡೀಪ್‌ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಮಾರ್ಗದರ್ಶನ, ಪೈಲಟ್ ಯೋಜನೆಗಳು ಮತ್ತು ಸಹ-ಹೂಡಿಕೆಗಳ ಮೂಲಕ ವೇಗವಾಗಿ ಬೆಳೆಯಲು ನೆರವಾಗುವುದು ಅಗತ್ಯವಾಗಿದೆ ಎಂದರು.

ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಕೈಗಾರಿಕೆಗಳ ನಡುವಿನ ಸಹಯೋಗವನ್ನು ಮತ್ತಷ್ಟು ಬಲಪಡಿಸುವ ಮೂಲಕ ಉತ್ಕೃಷ್ಟತಾ ಕೇಂದ್ರಗಳ (Centres of Excellence) ಸಾಮರ್ಥ್ಯವನ್ನು ವಿಸ್ತರಿಸಲಾಗುತ್ತಿದೆ. ಪ್ರಸ್ತಾವಿತ AI ವಿಶ್ವವಿದ್ಯಾಲಯದ ಮೂಲಕ ಜವಾಬ್ದಾರಿಯುತ AI ಶಿಕ್ಷಣ, ಸಂಶೋಧನೆ ಹಾಗೂ ಕೈಗಾರಿಕೆಯ ಅಗತ್ಯಗಳಿಗೆ ಹೊಂದುವ ಪಠ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಅವರು ತಿಳಿಸಿದರು.

ಸರ್ಕಾರದ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು AI ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸಲಾಗುತ್ತಿದೆ. ಸುರಕ್ಷಿತ ನಿಯಂತ್ರಣ ವ್ಯವಸ್ಥೆ (Regulatory Sandbox) ಅಡಿಯಲ್ಲಿ ಸಾರ್ವಜನಿಕ ಹಿತಾಸಕ್ತಿಯ AI ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಇದರ ಮೂಲಕ ನಾಗರಿಕರಿಗೆ ಇನ್ನಷ್ಟು ವೇಗವಾದ, ಪಾರದರ್ಶಕ ಮತ್ತು ಪರಿಣಾಮಕಾರಿ ಸೇವೆಗಳನ್ನು ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಸಚಿವರು ಹೇಳಿದರು.

ಈ ಆದ್ಯತೆಗಳನ್ನು ಸಾಕಾರಗೊಳಿಸಲು ರಾಜ್ಯ ಸರ್ಕಾರ ಈಗಾಗಲೇ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸಿದೆ. ನಿಪುಣ ಕರ್ನಾಟಕ ಕಾರ್ಯಕ್ರಮದ ಮೂಲಕ ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ಜಾಗತಿಕ ನಾವೀನ್ಯತಾ ಮೈತ್ರಿಕೂಟ (Global Innovation Alliance GIA) ಹಾಗೂ ಶೀಘ್ರದಲ್ಲೇ ಆರಂಭವಾಗಲಿರುವ ಜಾಗತಿಕ ನಾವೀನ್ಯತೆ ಮತ್ತು ಬೆಳವಣಿಗೆ ಮೈತ್ರಿಕೂಟ (Global Innovation and Growth Alliance -GIGA) ಮೂಲಕ ಕರ್ನಾಟಕದ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸಲಾಗುತ್ತಿದೆ.

ಅದೇ ರೀತಿ ಎಲಿವೇಟ್ ಹಾಗೂ ಎಲಿವೇಟ್ ನೆಕ್ಸ್ಟ್ ಯೋಜನೆಗಳ ಮೂಲಕ ಆರಂಭಿಕ ಹಂತದ ಮತ್ತು ಡೀಪ್‌ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಆರ್ಥಿಕ ನೆರವು, ಮಾರ್ಗದರ್ಶನ, ಹೂಡಿಕೆದಾರರ ಸಂಪರ್ಕ ಹಾಗೂ ಮಾರುಕಟ್ಟೆ ಅವಕಾಶಗಳನ್ನು ಒದಗಿಸಲಾಗುತ್ತಿದೆ. ರಾಜ್ಯದ ವಿವಿಧ ಗತಿಕ ಆವಿಷ್ಕಾರ ಕೇಂದ್ರಗಳ (Centres of Excellence) ಮೂಲಕ ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಕ್ವಾಂಟಂ ತಂತ್ರಜ್ಞಾನ, ಸೆಮಿಕಂಡಕ್ಟರ್‌, ರೋಬೋಟಿಕ್ಸ್‌, ಫಿನ್‌ಟೆಕ್‌, ಬಯೋ-ಇನ್ನೋವೇಷನ್ ಸೇರಿದಂತೆ ಹಲವು ಭವಿಷ್ಯದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ನವೋದ್ಯಮಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಕಟಿಸಿದರು.

ಉದ್ಯಮ ವಲಯವು ಕೇವಲ ಹೂಡಿಕೆ ಮಾಡುವುದಕ್ಕಷ್ಟೇ ಸೀಮಿತವಾಗದೆ, ಸ್ಟಾರ್ಟ್‌ಅಪ್‌ಗಳಿಗೆ ಮಾರ್ಗದರ್ಶನ ನೀಡುವುದು, ಶಿಕ್ಷಣ ಸಂಸ್ಥೆಗಳನ್ನು ದತ್ತು ಪಡೆದು ಕೌಶಲ್ಯಾಭಿವೃದ್ಧಿಗೆ ಕೈಜೋಡಿಸುವುದು, ಉತ್ಕೃಷ್ಟತಾ ಕೇಂದ್ರಗಳಲ್ಲಿ ಪಾಲುದಾರರಾಗುವುದು ಹಾಗೂ ಸಂಶೋಧನೆ ಮತ್ತು ಉತ್ಪನ್ನ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸಚಿವರು ಕರೆ ನೀಡಿದರು.

ಕರ್ನಾಟಕ ಸರ್ಕಾರವು ತಂತ್ರಜ್ಞಾನ ಕ್ಷೇತ್ರದಲ್ಲಿನ ಬದಲಾವಣೆಗಳಿಗೆ ಸ್ಪಂದಿಸುವ, ಉದ್ಯಮ ಸ್ನೇಹಿ ಹಾಗೂ ಭವಿಷ್ಯದ ಅಗತ್ಯಗಳಿಗೆ ಹೊಂದಿಕೊಳ್ಳುವ ನೀತಿಗಳನ್ನು ರೂಪಿಸುವುದನ್ನು ಮುಂದುವರಿಸಲಿದೆ. ಸರ್ಕಾರ ಮತ್ತು ಉದ್ಯಮದ ನಡುವಿನ ನಿರಂತರ ಸಂವಾದ ಹಾಗೂ ಸಹಭಾಗಿತ್ವವೇ ಕರ್ನಾಟಕವನ್ನು ಜಾಗತಿಕ AI ಮತ್ತು ಡೀಪ್‌ಟೆಕ್ ನವೋದ್ಯಮದ ಕೇಂದ್ರವಾಗಿ ಮತ್ತಷ್ಟು ಬಲಪಡಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles