ಉಪನಿರ್ದೇಶಕರ ಇಲಾಖೆ–2 ಸ್ಥಳಾಂತರ ವಿರೋಧಿಸಿ 12 ದಿನಗಳಿಂದ ಧರಣಿ — ನಾಳೆಯಿಂದ ಉಪವಾಸ ಸತ್ಯಾಗ್ರಹಕ್ಕೆ ರೈತ ಸಂಘ ಘೋಷಣೆ
ವರದಿ. ಲಿಂಗಸುಗೂರು
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಶಿವು ಪುತ್ರಗೌಡ ಅವರ ನೇತೃತ್ವದಲ್ಲಿ ಉಪನಿರ್ದೇಶಕರ ಇಲಾಖೆ–2 ಸ್ಥಳಾಂತರದ ವಿರುದ್ಧ ನಡೆಯುತ್ತಿರುವ ಧರಣಿ ಹೋರಾಟ ಇಂದು 12ನೇ ದಿನಕ್ಕೆ ಕಾಲಿಟ್ಟಿದೆ. ಸ್ಥಳಾಂತರದಿಂದ ರೈತರಿಗೆ ಉಂಟಾಗುವ ಆಡಳಿತಾತ್ಮಕ ತೊಂದರೆಗಳನ್ನು ಉಲ್ಲೇಖಿಸಿ, ಇಲಾಖೆ ಸ್ಥಳಾಂತರವನ್ನು ತಕ್ಷಣ ರದ್ದುಗೊಳಿಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.
ಶಿವು ಪುತ್ರಗೌಡ ಅವರು,
“ರೈತರ ಕೆಲಸಕಾರ್ಯ ಗಳಿಗೆ ನೇರವಾಗಿ ಸಂಪರ್ಕ ಹೊಂದಿರುವ ಪ್ರಮುಖ ಇಲಾಖೆ ಸ್ಥಳಾಂತರಗೊಳ್ಳುವುದರಿಂದ ಲಿಂಗಸುಗೂರ ತಾಲೂಕಿನ ರೈತರು ದೂರದೂರಿಗೆ ತೆರಳಿ ಸಮಯ–ಹಣ ನಷ್ಟ ಅನುಭವಿಸಬೇಕಾಗುತ್ತದೆ. ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿರುವುದು ವಿಷಾದನೀಯ,” ಎಂದು ಹೇಳಿದರು.
ಧರಣಿ ಸ್ಥಳದಲ್ಲಿ ದಿನವಿಡೀ ರೈತರು, ಸಂಘದ ಹೋರಾಟಗಾರರು, ಮಹಿಳಾ ರೈತರು ಪ್ರತಿಭಟನೆ ನಡೆಸಿದರು. ಸರ್ಕಾರದ ನಿರ್ಲಕ್ಷ್ಯತೆಯನ್ನು ಖಂಡಿಸಿ ಘೋಷಣೆ ಕೂಗಲಾಯಿತು.
ಶಿವು ಪುತ್ರಗೌಡ ಮುಂದುವರಿಸಿ,
“ಸರ್ಕಾರ ಯಾವುದೇ ತೀರ್ಮಾನಕ್ಕೆ ಬರದಿದ್ದರೆ ಹೋರಾಟ ಹಿಂಪಡೆಯುವುದಿಲ್ಲ. ನಾಳೆಯಿಂದ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ. ಇದು ರೈತರ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟ, ಹಿಂಜರಿಯುವ ಪ್ರಶ್ನೆಯೇ ಇಲ್ಲ,” ಎಂದು ಸ್ಪಷ್ಟಪಡಿಸಿದರು.
ರೈತ ನಾಯಕರು, ಸಂಘದ ಹಲವು ಘಟಕಗಳ ಪದಾಧಿಕಾರಿಗಳು ಮತ್ತು ಯುವ ಹೋರಾಟಗಾರರು ಧರಣಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ರೈತರ ಬೇಡಿಕೆಗೆ ತಕ್ಷಣ ಸ್ಪಂದಿಸಿ ಇಲಾಖೆ ಸ್ಥಳಾಂತರ ಆದೇಶವನ್ನು ರದ್ದುಪಡಿಸಬೇಕು ಎಂಬುದು ಪ್ರತಿಭಟನೆಕಾರರ ಒತ್ತಾಯವಾಗಿದೆ . ಈ ಸಂದರ್ಭದಲ್ಲಿ ಅನಂದ ಕುಂಬಾರ ವಿಜಯ್ ಕುಮಾರ್ ಪೋಳ್ ಬಸವರಾಜ್ ಸೇರಿದಂತೆ ಇತರರು ಇದ್ದರು

