ಕಡಿವಾಲ ಗ್ರಾಮದ ಪ್ರತಿಭೆ ಸಂಗಮೇಶ ಗಡಾದ ಕ್ರಿಕೆಟ್ ಸಾಧನೆ: ರಾಜ್ಯ ಮಟ್ಟಕ್ಕೆ ಆಯ್ಕೆ
ಕುಷ್ಟಗಿ: ತಾಲ್ಲೂಕಿನ ಕಡಿವಾಲ ಗ್ರಾಮದ ಯುವ ಪ್ರತಿಭೆ ಕುಮಾರ ಸಂಗಮೇಶ ಗಡಾದ ಅವರು ಕ್ರಿಕೆಟ್ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡುವ ಮೂಲಕ ಗ್ರಾಮಕ್ಕೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಬಳ್ಳಾರಿಯಲ್ಲಿ ನಡೆದ ಕಲ್ಬುರ್ಗಿ ವಿಭಾಗ ಮಟ್ಟದ ಪದವಿ ಕಾಲೇಜುಗಳ ಕ್ರಿಕೆಟ್ ಟೂರ್ನಿಯಲ್ಲಿ, ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯಾದ ಸಂಗಮೇಶ ಗಡಾದ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇವರ ಅಮೋಘ ಆಟದ ನೆರವಿನಿಂದ ತಂಡವು ಟ್ರೋಫಿಯನ್ನು ಗೆದ್ದುಕೊಂಡಿದ್ದು, ಈ ಸಾಧನೆಯ ಆಧಾರದ ಮೇಲೆ ಸಂಗಮೇಶ ಅವರು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಹೆಮ್ಮೆಯ ಸಂಗತಿ:
ಸಂಗಮೇಶನ ಈ ಸಾಧನೆಗೆ ಕಡಿವಾಲ ಗ್ರಾಮದ ಶ್ರೀವಾದಿರಾಜ ಪಾಟೀಲ ಅವರು ಸಂತಸ ವ್ಯಕ್ತಪಡಿಸಿ, ಇದೊಂದು ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದ್ದಾರೆ. ಮಗನ ಸಾಧನೆಯ ಬಗ್ಗೆ ಮಾತನಾಡಿದ ತಾಯಿ ಗೀತಾ ಮತ್ತು ತಂದೆ ಶಿವಯ್ಯ ಗಡಾದ ಅವರು, “ನಮ್ಮ ಮಗ ಇನ್ನು ಹೆಚ್ಚಿನ ಸಾಧನೆ ಮಾಡಿ ರಣಜಿ ಪಂದ್ಯಗಳಲ್ಲಿ ಆಡಬೇಕು ಎಂಬುದು ನಮ್ಮ ಆಸೆ” ಎಂದು ಹರ್ಷದಿಂದ ನುಡಿದರು.
ಗಣ್ಯರ ಹಾರೈಕೆ:
ಮಾಜಿ ಶಾಸಕರಾದ ಶ್ರೀ ಅಮರೇಗೌಡ ಪಾಟೀಲ ಬಯ್ಯಾಪುರ ಅವರು ಸಂಗಮೇಶನ ಬೆನ್ನುತಟ್ಟಿ ಅಭಿನಂದಿಸಿದ್ದಾರೆ. ಮುಂಬರುವ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಾಗಲಿ ಎಂದು ಅವರು ಶುಭ ಹಾರೈಸಿದ್ದಾರೆ.

