15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

“ಕಾವೇರಿ ನೀರಾವರಿ ನಿಗಮ ಸಭೆ: ಅಧಿಕಾರಿಗಳಿಗೆ ಚಾಟಿ ಬೀಸಿದ ಸಚಿವ ಚಲುವರಾಯಸ್ವಾಮಿ, ಮೇಕೆದಾಟು ತ್ವರಿತಗತಿಗೆ ಸೂಚನೆ”

ಎಸಿ ರೂಂನಲ್ಲಿ ಕೂರಬೇಡಿ, ಫೀಲ್ಡಿಗಿಳಿದು ಕೆಲಸ ಮಾಡಿ: ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಖಡಕ್ ಎಚ್ಚರಿಕೆ

ಬೆಂಗಳೂರು (ಸೆ. 16)
ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿನ ಯೋಜನೆಗಳು, ಕುಡಿಯುವ ನೀರಿನ ಸಮಸ್ಯೆ ಹಾಗೂ ಮೇಕೆದಾಟು ಯೋಜನೆ ಕುರಿತಂತೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೆ ಕಾರ್ಯೋನ್ಮುಖರಾಗಬೇಕು. ಹವಾನಿಯಂತ್ರಿತ (ಎಸಿ) ಕೊಠಡಿಯಲ್ಲಿ ಕುಳಿತು ಲೆಕ್ಕಾಚಾರ ಹಾಕುವ ಬದಲು, ನೇರವಾಗಿ ಫೀಲ್ಡಿಗಿಳಿದು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕೆಲಸ ಮಾಡದ ಅಧಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ ಅಮಾನತು ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ಕೃಷ್ಣಾ ಭಾಗ್ಯ ಜಲ ನಿಗಮದ ಸಭಾಂಗಣದಲ್ಲಿ ಇಂದು ಕಾವೇರಿ ನೀರಾವರಿ ನಿಗಮದ (ಸಿಎನ್‌ಎನ್) ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ಡ್ಯಾಂ ನಿರ್ವಹಣೆ ಮತ್ತು ಜೀರ್ಣೋದ್ಧಾರ
ರಾಜ್ಯದ ಡ್ಯಾಂಗಳಲ್ಲಿನ ನೀರಿನ ಪ್ರಮಾಣ, ಡೆಡ್ ಸ್ಟೋರೇಜ್, ತಮಿಳುನಾಡಿಗೆ ಹರಿಸಿದ ಹಾಗೂ ಬಿಳಿಗುಂಡ್ಲುವಿನಲ್ಲಿ ದಾಖಲಾದ ನೀರಿನ ಪ್ರಮಾಣ, ಅಚ್ಚುಕಟ್ಟು ವ್ಯಾಪ್ತಿಯ ಪರಿಸ್ಥಿತಿ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ದಿನಕ್ಕೆರೆಡು ಭಾರಿ ಕಡ್ಡಾಯವಾಗಿ ಒದಗಿಸುವಂತೆ ಸಚಿವರು ಸೂಚಿಸಿದರು.

ಬೇಸಿಗೆ ಮುಗಿಯುವವರೆಗೂ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ನಿಗಮದ ವ್ಯಾಪ್ತಿಗೆ ಸೇರುವ ಒಟ್ಟು 23 ಸಣ್ಣ ಅಣೆಕಟ್ಟುಗಳ ಪೈಕಿ ಮಂದಗೆರೆ ಹಾಗೂ ಹೇಮಗಿರಿ ಅಣೆಕಟ್ಟುಗಳು ಬರೋಬ್ಬರಿ 800 ವರ್ಷಗಳಷ್ಟು ಹಳೆಯದಾಗಿದ್ದು, ಶಿಥಿಲಾವಸ್ಥೆಯಲ್ಲಿವೆ. ತಕ್ಷಣವೇ ಇವುಗಳ ದುರಸ್ತಿಗೆ ಅಂದಾಜು ಪಟ್ಟಿ ಸಿದ್ಧಪಡಿಸಿ, ನೀರಿನ ಸೋರಿಕೆ ತಡೆಯಬೇಕು. ಜೊತೆಗೆ ಹೇಮಾವತಿ ನೀರನ್ನು ಕುಣಿಗಲ್ ಮಾರ್ಗವಾಗಿ ಹುಲಿಯೂರುದುರ್ಗದವರೆಗೆ ಹರಿಸಲು ಬಾಕಿ ಇರುವ 32 ಕಿ.ಮೀ. ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ಮೇಕೆದಾಟು ಯೋಜನೆಯೇ ಶಾಶ್ವತ ಪರಿಹಾರ
ಬಹುನಿರೀಕ್ಷಿತ ಮೇಕೆದಾಟು ಯೋಜನೆ ಕುರಿತು ಮಾತನಾಡಿದ ಸಚಿವರು, ಕಳೆದ ಐದು ವರ್ಷಗಳಲ್ಲಿ ಸುಮಾರು 112.88 ಟಿಎಂಸಿ ಹೆಚ್ಚುವರಿ ಕಾವೇರಿ ನೀರು ಸಮುದ್ರ ಪಾಲಾಗಿದೆ. ಹೀಗಾಗಿ ಬರಗಾಲದಲ್ಲೂ ಎರಡು ರಾಜ್ಯಗಳಿಗೆ ಅನುಕೂಲವಾಗುವ ಹಾಗೂ ಕನಿಷ್ಠ 22 ಟಿಎಂಸಿ ಕುಡಿಯುವ ನೀರನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಮೇಕೆದಾಟು ಯೋಜನೆಯೊಂದೇ ಶಾಶ್ವತ ಪರಿಹಾರವಾಗಿದೆ ಎಂದರು.

ತಮಿಳುನಾಡು ಕೇಳಿದ್ದ ನೀರಿನ ಹರಿವಿನ ಕುರಿತ ಪ್ರಶ್ನೆಗಳಿಗೆ ಎಸ್‌ಒಪಿ (SOP) ಕಳುಹಿಸುವ ಮೂಲಕ ಈಗಾಗಲೇ ಸಮರ್ಪಕ ಉತ್ತರ ನೀಡಿ ಗೊಂದಲ ಬಗೆಹರಿಸಲಾಗಿದೆ. ಕೇಂದ್ರ ಜಲ ಆಯೋಗವೂ (ಸಿಡಬ್ಲ್ಯುಸಿ) ಸಕಾರಾತ್ಮಕವಾಗಿ ಸ್ಪಂದಿಸಿದೆ. ಮುಖ್ಯಮಂತ್ರಿಗಳ ಮೂಲಕ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ, ರಾಜ್ಯದ ಎಲ್ಲಾ ಸಂಸದರ ಸಹಕಾರದೊಂದಿಗೆ ಪ್ರಧಾನಿಗಳಿಗೆ ಯೋಜನೆಯ ಲಾಭವನ್ನು ಮನವರಿಕೆ ಮಾಡಿಕೊಡಲಾಗುವುದು. ಮುಳುಗಡೆಯಾಗುವ ಪ್ರದೇಶಕ್ಕೆ ಪರ್ಯಾಯ ಭೂಮಿ ಸಿಕ್ಕ ತಕ್ಷಣ ಕಾಮಗಾರಿ ಆರಂಭಿಸಿ ಮೂರು ವರ್ಷದೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಯೋಜನೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ತಕ್ಷಣ ಡಿಜಿಟಲೀಕರಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕರಿಗೆ ಸಮಾನ ಅನುದಾನ ಹಾಗೂ ಶ್ರೀರಂಗ ಏತ ನೀರಾವರಿ
ಅಭಿವೃದ್ಧಿ ಕಾರ್ಯಗಳಲ್ಲಿ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ, ರಾಜ್ಯದ ಎಲ್ಲಾ ಶಾಸಕರಿಗೂ ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ಸಮಾನವಾಗಿ ತಲಾ ಎರಡರಿಂದ ಮೂರು ನೀರಾವರಿ ಕಾಮಗಾರಿಗಳನ್ನು ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಹಾರಂಗಿ ಹಾಗೂ ಕಬಿನಿ ವ್ಯಾಪ್ತಿಯ ಅಪೂರ್ಣ ಕಾಮಗಾರಿಗಳನ್ನು ಮುಗಿಸಬೇಕು. ಶ್ರೀರಂಗ ಏತ ನೀರಾವರಿ ಯೋಜನೆಗೆ ಈಗಾಗಲೇ ಖರ್ಚಾಗಿರುವ ಹಣವನ್ನು ಸದ್ಬಳಕೆ ಮಾಡಿಕೊಂಡು, ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ಶೀಘ್ರವೇ ನೀರು ಹರಿಸಲು ಕ್ರಮಕೈಗೊಳ್ಳಬೇಕು. ಜನಪ್ರತಿನಿಧಿಗಳೊಂದಿಗೆ ಸೌಹಾರ್ದ ಮಾತುಕತೆ ನಡೆಸಿ ಯೋಜನೆಯ ಮಹತ್ವ ವಿವರಿಸುವಂತೆ ಹಾಗೂ ರಾಜಕೀಯ ಒತ್ತಡಗಳಿಗೆ ಮಣಿದು ಯೋಜನೆಗಳನ್ನು ಸ್ಥಗಿತಗೊಳಿಸಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪೊಲೀಸ್ ಭದ್ರತೆಯಲ್ಲಿ ಕೆರೆ ತುಂಬಿಸುವ ಕಾರ್ಯ
ಒಟ್ಟು ನೀರಿನಲ್ಲಿ ಶೇಕಡಾ 20ರಷ್ಟನ್ನು ಕುಡಿಯುವ ನೀರಿಗಾಗಿಯೇ ಕಾಯ್ದಿರಿಸಬೇಕು. ತುಮಕೂರು, ಬಸರಾಳು, ನಾಗಮಂಗಲ ಭಾಗದ ಕೆರೆಗಳಿಗೆ ಮೂರು ದಿನಕ್ಕೊಮ್ಮೆ ನೀರು ಬಿಡಬೇಕು. ಅಗತ್ಯ ಬಿದ್ದರೆ ಪೊಲೀಸ್ ಭದ್ರತೆಯಲ್ಲಾದರೂ ಕೆರೆ-ಕಟ್ಟೆಗಳನ್ನು ತುಂಬಿಸಬೇಕು ಎಂದು ಖಡಕ್ ಸೂಚನೆ ನೀಡಿದರು.

ಆಡಳಿತಾತ್ಮಕ ಸುಧಾರಣೆ; ಆರ್ಥಿಕ ನೆರವು
ಡ್ಯಾಂಗಳ ಪುನಶ್ಚೇತನ ಹಾಗೂ ಅಗತ್ಯ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯೊಂದಿಗೆ ಪ್ರತ್ಯೇಕ ಸಭೆ ನಡೆಸಿ, ಪರಿಹಾರ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

ನಿಗಮದಲ್ಲಿ ಖಾಲಿ ಇರುವ ಶೇಕಡಾ 57ರಷ್ಟು ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡುವುದಾಗಿ ಭರವಸೆ ನೀಡಿದ ಸಚಿವರು, ಎಲ್ಲ ನಿಗಮಗಳನ್ನು ಸೇರಿಸಿ ಜಲಸಂಪನ್ಮೂಲ ಸಚಿವರ ನಿಯಂತ್ರಣದಲ್ಲಿ ಕಮಿಷನರೇಟ್ ರಚಿಸುವ ಅಧಿಕಾರಿಗಳ ಅಭಿಪ್ರಾಯಕ್ಕೂ ಸಮ್ಮತಿ ಸೂಚಿಸಿದರು.

ಕಾವೇರಿ ಜಲಾನಯನ ಪ್ರದೇಶದ ವಿಸ್ತಾರ
ಒಟ್ಟು 11 ಜಿಲ್ಲೆಗಳಲ್ಲಿ 34,273 ಚದರ ಕಿ.ಮೀ. ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಕಾವೇರಿ ಕಣಿವೆಯಲ್ಲಿ ನ್ಯಾಯಾಧಿಕರಣದ ತೀರ್ಪಿನಂತೆ 18.85 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಒದಗಿಸುವ ಗುರಿ ಹೊಂದಲಾಗಿದೆ. ಇದರಲ್ಲಿ ಬೃಹತ್ ಮತ್ತು ಮಧ್ಯಮ ನೀರಾವರಿಯಡಿ 15.55 ಲಕ್ಷ ಎಕರೆ ಹಾಗೂ ಸಣ್ಣ ನೀರಾವರಿಯಡಿ 3.30 ಲಕ್ಷ ಎಕರೆ ಪ್ರದೇಶ ಸೇರಿದೆ. ಈ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು, ಆಧುನೀಕರಣ ಮತ್ತು ನಿರ್ವಹಣೆ ಮಾಡುವುದು ಕಾವೇರಿ ನೀರಾವರಿ ನಿಗಮದ ಮುಖ್ಯ ಉದ್ದೇಶವಾಗಿದೆ. ಮುಖ್ಯಮಂತ್ರಿಗಳು ಹಾಗೂ ತಾವೇ ಕಾವೇರಿ ಜಲಾನಯನ ಪ್ರದೇಶದವರಾಗಿರುವುದರಿಂದ ಯಾವುದೇ ಕಾಮಗಾರಿಗಳು ಅಪೂರ್ಣವಾಗಬಾರದು ಎಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಸಿದರು.

ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿ ಕುಲಕರ್ಣಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಸೇರಿದಂತೆ ನಿಗಮದ ಹಿರಿಯ ಎಂಜಿನಿಯರ್‌ಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles