16.4 C
New York
Tuesday, September 29, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

​ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯದ ರೈತರ ಹಿತ ಕಾಯಲು ಬಸವರಾಜ ಬೊಮ್ಮಾಯಿ ಆಗ್ರಹ

ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಸೂಕ್ತ ದಾಖಲೆಗಳೊಂದಿಗೆ ಸಮರ್ಥ ವಾದ ಮಂಡಿಸಬೇಕು: ಬಸವರಾಜ ಬೊಮ್ಮಾಯಿ

​ಬೆಂಗಳೂರು:”ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆಯಾಗಿರುವುದು ಕಾವೇರಿ ನೀರಿನ ಅಭಾವಕ್ಕೆ ನಿಸರ್ಗವೇ ನೀಡಿದ ಪರಿಹಾರವಾಗಿದೆ. ​ಆದರೆ, ಇದು ತಾತ್ಕಾಲಿಕ ಶಮನವೇ ಹೊರತು ಶಾಶ್ವತ ಪರಿಹಾರವಲ್ಲ. ರಾಜ್ಯ ಸರ್ಕಾರ ತನ್ನ ಬಳಿ ಇರುವ ಸಮಗ್ರ ದತ್ತಾಂಶಗಳನ್ನು ಆಧಾರವಾಗಿಟ್ಟುಕೊಂಡು ಸುಪ್ರೀಂ ಕೋರ್ಟ್‌ನಲ್ಲಿ ಸರಿಯಾದ ವಾದ ಮಂಡಿಸಬೇಕು. ಇಲ್ಲವಾದಲ್ಲಿ ಕೋರ್ಟ್‌ನಿಂದ ಕಠಿಣ ಆದೇಶ ಬಂದರೆ ರಾಜ್ಯ ಸರ್ಕಾರ ಮತ್ತೆ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಎಚ್ಚರಿಸಿದರು.

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಇಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ವಯನಾಡು, ಕೊಡಗು, ಚಿಕ್ಕಮಗಳೂರು ಮತ್ತು ಸಕಲೇಶಪುರ ಭಾಗಗಳಲ್ಲಿ ಉತ್ತಮ ಮಳೆಯಾಗಿರುವುದು ಕಾವೇರಿ ನೀರಿನ ಅಭಾವಕ್ಕೆ ನಿಸರ್ಗವೇ ತಾತ್ಕಾಲಿಕವಾಗಿ ನೀಡಿದ ಪರಿಹಾರವಾಗಿದೆ”. ಆದರೆ, ರಾಜ್ಯ “ಸರ್ಕಾರ ಈ ವಿಷಯದಲ್ಲಿ ನಿರಾಳವಾಗಿ ಕೂರುವಂತಿಲ್ಲ. ವರ್ಷವಿಡೀ ರಾಜ್ಯಕ್ಕೆ ಕುಡಿಯುವ ನೀರು ಹಾಗೂ ರೈತರ ಕೃಷಿಗೆ ನೀರು ಪೂರೈಸುವುದು ಬಹುಮುಖ್ಯವಾದ ಸವಾಲಾಗಿದೆ” ಎಂದರು.

​ಸುಪ್ರೀಂ ಕೋರ್ಟ್‌ನಲ್ಲಿ ಸೂಕ್ತ ವಾದ ಮಂಡಿಸಲಿ
ಪ್ರತಿ 15 ದಿನಗಳಿಗೊಮ್ಮೆ ಸಿಡಬ್ಲ್ಯು ಆರ್ ಸಿ (ಕಾವೇರಿ ನೀರು ನಿಯಂತ್ರಣ ಸಮಿತಿ) ಹಾಗೂ ತಿಂಗಳಿಗೊಮ್ಮೆ ಸಿಡಬ್ಲ್ಯು ಎಂಎ (ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ) ಸಭೆಗಳು ನಡೆಯಲಿದ್ದು, ಕಷ್ಟಕಾಲದ ಸೂತ್ರದ ಆಧಾರದ ಮೇಲೆ ನೀರು ಬಿಡಬೇಕಾಗುತ್ತದೆ. ಈಗಾಗಲೇ ಡಿಎಂಕೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಬರುವ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ. ರಾಜ್ಯ ಸರ್ಕಾರ ತನ್ನ ಬಳಿ ಇರುವ ಸಮಗ್ರ ದತ್ತಾಂಶಗಳನ್ನು ಆಧಾರವಾಗಿಟ್ಟುಕೊಂಡು ಸುಪ್ರೀಂ ಕೋರ್ಟ್‌ನಲ್ಲಿ ಸರಿಯಾದ ವಾದ ಮಂಡಿಸಬೇಕು. ಇಲ್ಲವಾದಲ್ಲಿ ಕೋರ್ಟ್‌ನಿಂದ ಕಠಿಣ ಆದೇಶ ಬಂದರೆ ರಾಜ್ಯ ಸರ್ಕಾರ ಮತ್ತೆ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಅವರು ಹೇಳಿದರು.

​ಸರ್ಕಾರದ ಸಾಧನೆಯಲ್ಲ
ನೀರು ಬಿಡುವ ಪ್ರಮಾಣವನ್ನು 9,500 ಕ್ಯೂಸೆಕ್‌ನಿಂದ 3,000 ಕ್ಯೂಸೆಕ್‌ಗೆ ಇಳಿಸಿರುವುದನ್ನೇ ಸರ್ಕಾರ ದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವುದಕ್ಕೆ ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿದರು. “ರೈತರಿಗೆ, ನಾಲೆಗಳಿಗೆ ಹಾಗೂ ಕೆರೆಗಳಿಗೆ ನೀರು ತುಂಬಿಸಿದ್ದರೆ ಅದನ್ನು ಸಾಧನೆ ಎನ್ನಬಹುದಿತ್ತು. ಕೆಆರ್‌ಎಸ್ ಅಣೆಕಟ್ಟಿನಿಂದ ಹನಿ ನೀರನ್ನೂ ನಮ್ಮ ರೈತರಿಗೆ ಬಿಡದೆ, ಸಾಧನೆ ಎಂದು ಬಿಂಬಿಸಿಕೊಳ್ಳುವುದು ಸರಿಯಲ್ಲ” ಎಂದು ಹೇಳಿದರು.

​ರೈತರಿಗೆ ಸೂಕ್ತ ಪರಿಹಾರ ನೀಡಲು ಆಗ್ರಹ:
ಮುಂಗಾರು ಮತ್ತು ಹಿಂಗಾರು ಬೆಳೆಗಳಿಗೆ ನೀರಿಲ್ಲದ ಕಾರಣ ‘ಬಿತ್ತನೆ ಮಾಡಬೇಡಿ’ ಎಂದು ಸರ್ಕಾರ ಹೇಳಿದ್ದರೂ, ರೈತರು ಸುಮಾರು ಶೇ. 70ರಷ್ಟು ಬಿತ್ತನೆ ಮಾಡಿದ್ದಾರೆ. ಕೃಷಿ ಚಟುವಟಿಕೆ ಮಾಡಬೇಡಿ ಎಂದ ಮೇಲೆ ರೈತರ ಸಂಪೂರ್ಣ ವರ್ಷದ ಜೀವನೋಪಾಯಕ್ಕೆ ಸರ್ಕಾರ ನೀಡುವ ನಷ್ಟ ಪರಿಹಾರ ಏನು? ಎಂದು ಬೊಮ್ಮಾಯಿ ಪ್ರಶ್ನಿಸಿದರು.
​ಮುಂದಿನ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿಯೂ ಕಾವೇರಿ ನೀರಿನ ಅಭಾವ ಹಾಗೂ ನೀರು ಬಿಡುವಂತೆ ಆದೇಶಗಳು ಬರುವ ಸಾಧ್ಯತೆ ಇದೆ. ಆದ್ದರಿಂದ ಬೇಸಿಗೆಯಲ್ಲಿ ಬೆಂಗಳೂರು, ಮಂಡ್ಯ, ಮೈಸೂರು ಭಾಗಗಳಿಗೆ ಕುಡಿಯುವ ನೀರು ಹಾಗೂ ಕೃಷಿ ನೀರಿಗೆ ಯಾವುದೇ ತೊಂದರೆಯಾಗದಂತೆ ಹೆಜ್ಜೆಯಿಡಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.

ಮೇಕೆದಾಟುವಿಗೆ ಸಹಕಾರ
​”ಮೇಕೆದಾಟು ಯೋಜನೆಯನ್ನು ನಾವೆಲ್ಲರೂ ಸೇರಿ ಒಟ್ಟಿಗೆ ಮಾಡಬೇಕು ಎಂದು ಹೇಳಿದ್ದಾರೆ. ಅದಕ್ಕೆ ತಾತ್ವಿಕವಾಗಿ ನಮ್ಮ ಒಪ್ಪಿಗೆಯೂ ಇದೆ. ಹಲವಾರು ವಿಚಾರಗಳಲ್ಲಿ ರಾಜ್ಯದ ಹಿತದೃಷ್ಟಿಯಿಂದ ನಾವೆಲ್ಲಾ ಬೆಂಬಲ ಕೊಟ್ಟಿದ್ದೇವೆ.
​ಆದರೆ, ರೈತರ ವಿಚಾರದಲ್ಲಿ ಹಾಗೂ ಜನಸಾಮಾನ್ಯರ ಕುಡಿಯುವ ನೀರಿನ ವಿಚಾರದಲ್ಲಿ ನಾವು ಈ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದೇವೆ. ನೀರಿನ ನಿರ್ವಹಣೆಯನ್ನು ಸರಿಯಾಗಿ ಮಾಡಬೇಕು. ಇಲ್ಲದಿದ್ದರೆ, ಈ ಭಾಗದ ಜನ ನಿಮ್ಮನ್ನು ಕ್ಷಮಿಸುವುದಿಲ್ಲ ಎನ್ನುವ ಮಾತನ್ನು ಬಹಳ ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.

ಕೆಆರ್ ಎಸ್ ನಿಂದ ನೀರು ಬಿಡಬೇಡಿ
ಸರ್ಕಾರಕ್ಕೆ ಏನು ಸಲಹೆ ನೀಡಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ತಾತ್ಕಾಲಿಕ ಶಮನ ಆದರೆ ಈ ಸಮಾಧಾನಕ್ಕೆ ಸರ್ಕಾರ ಸುಮ್ಮನೆ ಕುಳಿತುಕೊಳ್ಳಬಾರದು. ಅವರು ನಿರಂತರವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಬೇಕು ಮತ್ತು ನಮ್ಮ ಕುಡಿಯುವ ನೀರು ಹಾಗೂ ಬೆಳೆಗಳಿಗೆ ಅಗತ್ಯವಿರುವ ನೀರಿನ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು. ಅದಕ್ಕೇ ಮೊದಲ ಆದ್ಯತೆ ನೀಡಬೇಕು. ಹೆಚ್ಚುವರಿ ನೀರು ಹೋಗುವುದು ಹೋಗಲಿ. ಕೆಆರ್‌ಎಸ್‌ಗೆ ಈಗ ಒಳಹರಿವು ಹೆಚ್ಚಾಗಿದೆ. ಅದು ಎಲ್ಲಿಯವರೆಗೆ ತುಂಬುವುದಿಲ್ಲವೋ ಅಲ್ಲಿಯವರೆಗೂ ಅಲ್ಲಿಂದ ನೀರು ಬಿಡಬೇಡಿ, ನಮ್ಮ ರೈತರಿಗೆ, ಕೆನಾಲ್‌ಗೆ, ಕೆರೆಗಳಿಗೆ ನೀರು ಬಿಡಿ, ಕುಡಿಯುವ ನೀರಿಗೆ ನೀರು ಬಿಡಿ ಅಂತ ಹೇಳಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles