15.1 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಸೂಚನೆ ಹೊರಡಿಸುವ ಬಗ್ಗೆ ಬಿಜೆಪಿಯವರು ಧ್ವನಿ ಎತ್ತುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಸೂಚನೆ ಹೊರಡಿಸುವ ಬಗ್ಗೆ ಬಿಜೆಪಿಯವರು ಧ್ವನಿ ಎತ್ತುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಮುಂದಿನ ವಾರ ದೆಹಲಿಗೆ ಹೋಗಿ, ಸಂಸದರ ಜತೆ ಚರ್ಚೆ

ಬೆಂಗಳೂರು, ಮಾರ್ಚ್ 12:

ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮಾಡಬಾರದು, ಪರಿಹಾರ ನೀಡಬಾರದು ಎಂದು ಆಂಧ್ರ ಪ್ರದೇಶ ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಿದೆ. ಆದರೂ ಬಿಜೆಪಿ ನಾಯಕರು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ನಾನು, ಹೆಚ್.ಕೆ ಪಾಟೀಲ್ ಹಾಗೂ ಎಂ.ಬಿ ಪಾಟೀಲ್ ಅವರು ಮಂಗಳವಾರ ದೆಹಲಿಗೆ ಹೋಗುತ್ತಿದ್ದು, ಎಲ್ಲಾ ಸಂಸದರನ್ನು ಭೇಟಿ ಮಾಡಿ ನಮ್ಮ ರಾಜ್ಯದ ವಿಚಾರಗಳನ್ನು ಪ್ರಸ್ತಾಪಿಸುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ ನಿಯಮ 330 ಅಡಿಯಲ್ಲಿ ನಡೆದ ಚರ್ಚೆ ವೇಳೆ ನಿರಾಣಿ ಹನುಮಂತ ರುದ್ರಪ್ಪ ಅವರು ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮುಳುಗಡೆಯಾಗುವ 20 ಗ್ರಾಮಗಳ ಪುನರ್ ವಸತಿ ವಿಚಾರವಾಗಿ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಈ ಯೋಜನೆ ಭೂ ಸಂತ್ರಸ್ತ ರೈತರಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರ ಈಗಾಗಲೇ ತೀರ್ಮಾನ ಮಾಡಿದ್ದು, ಪುನರ್ವಸತಿ ಕಾರ್ಯವನ್ನು ಬಾಕಿ ಉಳಿಸಿದ್ದೇವೆ. ಈ ಯೋಜನೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲಿ, ನ್ಯಾಯಬದ್ಧವಾಗಿ ಸಂತ್ರಸ್ತರಿಗೆ ಪರಿಹಾರ ನೀಡಲಾಗುವುದು” ಎಂದು ಉತ್ತರಿಸಿದರು.

“ಮಾನ್ಯ ಸದಸ್ಯರ ಕಾಳಜಿಗೆ ನಾವು ಅಭಿನಂದಿಸುತ್ತೇವೆ. ಸರ್ಕಾರ ಈ ಗ್ರಾಮಗಳ ವಿಚಾರದಲ್ಲಿ ಯಾಕೆ ಗೊಂದಲದಲ್ಲಿದೆ ಎಂದರೆ, ಈ ಪ್ರದೇಶದಲ್ಲಿ ಜಮೀನು ಕಳೆದುಕೊಂಡವರು ಕೋರ್ಟ್ ಗೆ ಹೋಗಿ, ಎಕರೆಗೆ 13-14 ಕೋಟಿ ಪರಿಹಾರ ನೀಡಬೇಕು ಎಂದು ಆದೇಶ ತಂದರು. ನಾವು ಅವರಿಗೆ ಅಷ್ಟು ಪರಿಹಾರ ನೀಡಿ, ನಂತರ ಪುನರ್ವಸತಿ ಕಲ್ಪಿಸುವುದು ಗೊಂದಲಮಯವಾಗಿದೆ. ಹೀಗಾಗಿ ನಾವು ಪರಿಹಾರ ನೀಡುವುದರ ಜತೆಗೆ ಪುನರ್ವಸತಿ ಬದಲು ಹಣವನ್ನೇ ನೀಡುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಈ ವಿಚಾರವಾಗಿ ನಿಮ್ಮ ಜತೆಗೂ ಚರ್ಚೆ ಮಾಡಲಾಗುವುದು. ಇಲ್ಲಿ ಜಮೀನು ಖರೀದಿ ಮಾಡುವುದು ಹಗರಣವಾಗುವುದಕ್ಕೆ ಅವಕಾಶ ನೀಡಬಾರದು ಎಂದು ಆಲೋಚಿಸಲಾಗುತ್ತಿದೆ. ಈ ಮಧ್ಯೆ ಆಂಧ್ರ ಪ್ರದೇಶದವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಭೂಸ್ವಾಧೀನ ಪ್ರಕ್ರಿಯೆ ಮಾಡಬಾರದು, ಪರಿಹಾರ ನೀಡಬಾರದು ಎಂದು ಆಕ್ಷೇಪಣೆ ಹಾಕಿದ್ದಾರೆ. ನಿಮ್ಮೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ವಿಚಾರವಾಗಿ ಪರಿಹಾರ ಕಂಡುಕೊಳ್ಳಲಾಗುವುದು” ಎಂದು ತಿಳಿಸಿದರು.

ರಾಜ್ಯದ ಹಿತದೃಷ್ಟಿಯಿಂದ ನ್ಯಾಯಾಲಯದಲ್ಲಿ 2 ಐತಿಹಾಸಿಕ ತೀರ್ಪು:

ಪ್ರಶೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯರಾದ ತಿಪ್ಪಣಪ್ಪಕಮಕನೂರು ಅವರು ನ್ಯಾಯಾಲಯದ ತೀರ್ಪಿನಿಂದ ಸರ್ಕಾರಕ್ಕೆ ಸುಮಾರು 10 ಸಾವಿರ ಕೋಟಿ ರೂ. ಉಳಿತಾಯವಾಗಿದ್ದು, ಇದನ್ನು ಎತ್ತಿನಹೊಳೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ವಿನಿಯೋಗಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ ಎಂದು ಕೇಳಿದಾಗ, “ಈ ಅವಧಿಯಲ್ಲಿ ನಾನು ನೀರಾವರಿ ಸಚಿವನಾದ ಬಳಿಕ ರಾಜ್ಯದ ಹಿತದೃಷ್ಟಿಯಿಂದ ನ್ಯಾಯಾಲಯದಲ್ಲಿ ಎರಡು ಪ್ರಮುಖ ತೀರ್ಪುಗಳು ಸಿಕ್ಕಿವೆ. ನಮ್ಮ ಒತ್ತಡ ಹಾಗೂ ತಂತ್ರಗಾರಿಕೆ ಮೇಲೆ ಮೇಕೆದಾಟು ಯೋಜನೆ ವಿಚಾರವಾಗಿ ಕೇಂದ್ರ ಸರ್ಕಾರ ಪರಿಶೀಲನೆ ಮಾಡಿ ತೀರ್ಮಾನ ಮಾಡಬೇಕು ಎಂದು ತೀರ್ಪು ನೀಡಿದೆ. ತಮಿಳುನಾಡಿಗೆ 177 ಟಿಎಂಸಿ ನೀರು ನೀಡಬೇಕು ಎಂದು ಹೇಳಿರುವುದು ನಮ್ಮ ದೊಡ್ಡ ಸಾಧನೆ. ಇನ್ನು ಭೂ ಪರಿಹಾರ ವಿಚಾರವಾಗಿ ಸಿಕ್ಕಿರುವ ತೀರ್ಪು ಎರಡನೆಯದು. ಈ ಎರಡು ತೀರ್ಪು ನೀಡಿರುವ ಸುಪ್ರೀಂ ಕೋರ್ಟಿಗೆ ಇಲ್ಲಿಂದಲೇ ನಮ್ಮ ಸರ್ಕಾರ ತಲೆಬಾಗುತ್ತದೆ. 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಂದರ್ಭವಿತ್ತು. ನಮ್ಮ ನಾಯಕರ ಒತ್ತಡದ ಮೇರೆಗೆ ನಮ್ಮ ಸರ್ಕಾರ ಭೂಸಂತ್ರಸ್ತರಿಗೆ 35-40 ಲಕ್ಷ ಪ್ರತಿ ಎಕರೆಗೆ ಪರಿಹಾರ ನಿಗದಿಪಡಿಸಿದೆ. ಅನೇಕ ಪ್ರಕರಣಗಳಲ್ಲಿ ವಕೀಲರು, ಅಧಿಕಾರಿಗಳು ಒಳ ಒಪ್ಪಂದ ಮಾಡಿಕೊಂಡು ಪ್ರಕರಣ ದಾಖಲಿಸಿ ಕೋಟಿಗಟ್ಟಲೆ ಹಣ ನೀಡುವಂತೆ ಆದೇಶ ತಂದಿದ್ದರು. ಆದರೆ ಸುಪ್ರೀಂ ಕೋರ್ಟ್ ಇಡೀ ದೇಶಕ್ಕೆ ನೀಡಿರುವ ತೀರ್ಪು ನೀಡಿದೆ. 120 ದಿನಗಳ ನಂತರ ಎಂಎಫ್ಎ ವಾಪಸ್ ಕಳುಹಿಸಿದೆ. ಇದರಿಂದ ಕೆಎನ್ಎನ್ಎಲ್ ನಲ್ಲಿ 900 ಪ್ರಕರಣ, ಕೆಬಿಜೆಎನ್ಎಲ್ ನಲ್ಲಿ 380 ಪ್ರಕರಣಗಳು ಒಂದೇ ದಿನ ವಾಪಸ್ ಬಂದಿವೆ. ಈ ಪ್ರಕರಣದಲ್ಲಿ ನಾವು 365 ಕೋಟಿ ಹಣವನ್ನು ನ್ಯಾಯಾಲಯಕ್ಕೆ ಠೇವಣಿ ಇಡಬೇಕಾಗಿತ್ತು. ಇನ್ನು ಮುಂದೆ ಇದಕ್ಕೆ ಕಾನೂನು ಸಚಿವರ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಲಾಗುವುದು, ನಾನು, ಹೆಚ್.ಕೆ ಪಾಟೀಲ್ ಹಾಗೂ ಎಂ.ಬಿ ಪಾಟೀಲ್ ಅವರು ಮಂಗಳವಾರ ದೆಹಲಿಗೆ ಹೋಗುತ್ತಿದ್ದು, ಎಲ್ಲಾ ಸಂಸದರನ್ನು ಭೇಟಿ ಮಾಡಿ ನಮ್ಮ ರಾಜ್ಯದ ವಿಚಾರಗಳನ್ನು ಪ್ರಸ್ತಾಪಿಸುತ್ತೇನೆ. ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ನಮ್ಮ ಸಚಿವ ಸಂಪುಟ ಸಭೆ ತೀರ್ಮಾನಕ್ಕೆ ಆಂಧ್ರ ಪ್ರದೇಶದವರು ಆಕ್ಷೇಪಣೆ ಮಾಡಿದ್ದಾರೆ. ಈ ಎಲ್ಲಾ ವಿಚಾರವಾಗಿ ನಾವು ಚರ್ಚೆ ಮಾಡುತ್ತೇವೆ. ಈ ತೀರ್ಪು ನಮ್ಮ ರಾಜ್ಯ ಮಾತ್ರವಲ್ಲ, ದೇಶಕ್ಕೆ ಹೊಸ ರೂಪ ನೀಡಿದೆ” ಎಂದು ತಿಳಿಸಿದರು.

ಈ ತೀರ್ಪಿನ ಆಧಾರವಾಗಿ ಬೇರೆ ಇಲಾಖೆಗಳಲ್ಲಿ ಇರುವ ಬಾಕಿ ಅರ್ಜಿಗಳ ವಿಲೇವಾರಿ ಮಾಡಬೇಕು ಎಂಬ ಮನವಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ನಾವು ಕಾನೂನಾತ್ಮಕವಾಗಿ ಪರಿಶೀಲನೆ ಮಾಡುತ್ತಿದ್ದೇವೆ. ರೈತರ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಭೂ ಪರಿಹಾರ ನೀಡಲಾಗುವುದು. ನಾವು ಬಾಗಲಕೋಟೆಗೆ ಹೋದಾಗ ಈ ವಿಚಾರವಾಗಿ ಚೆಕ್ ವಿತರಣೆ ಮಾಡಲಾಗುವುದು” ಎಂದು ತಿಳಿಸಿದರು.

ಪಿ.ಹೆಚ್ ಪೂಜಾರ್ ಅವರು ಬಾಗಲಕೋಟೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುತ್ತಿರುವವರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ, ಇ ಖಾತಾ ದಾಖಲೆಯಿಂದ ಇತರೆ ದಾಖಲೆಗಳ ಪಡೆಯುವ ಅರ್ಜಿಗಳು ವಿಲೇವಾರಿಯಾಗದೇ ಉಳಿದಿವೆ. ಬಿಟಿಡಿಎನಲ್ಲಿ ದಾಖಲೆ ತಿದ್ದಿ ಅವ್ಯವಹಾರ ನಡೆದಿರುವ ಶಂಕೆ ಇದೆ ಎಂದು ಕೇಳಿದಾಗ, “ಮಾನ್ಯ ಸದಸ್ಯರು ಪ್ರಸ್ತಾಪಿಸಿರುವ ವಿಚಾರವಾಗಿ ಒಮ್ಮೆ ಅಲ್ಲಿಗೆ ಹೋಗಿ ಪರಿಶೀಲನೆ ಮಾಡುತ್ತೇನೆ” ಎಂದು ಭರವಸೆ ನೀಡಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles