14.6 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಜನರ ಕೆಲಸ ವಿಳಂಬಿಸಿದರೆ ಶಿಸ್ತು ಕ್ರಮ: ಲಕ್ಷ್ಮಣ ಸವದಿ ಎಚ್ಚರಿಕೆ

ಅಥಣಿ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಮಾಲೀಕರು. ಜನರ ತೆರಿಗೆಯಿಂದ ವೇತನ ಪಡೆಯುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅವರ ಸೇವಕರಾಗಿದ್ದು, ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವುದು ಕರ್ತವ್ಯ’ ಎಂದು ಸಹಕಾರ ಸಚಿವ ಹಾಗೂ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ಖೋತ ಭವನದಲ್ಲಿ ನಡೆದ ‘ಪ್ರಜಾ ಸೇವಾ ಆಂದೋಲನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರ ಅಹವಾಲುಗಳನ್ನು ಸ್ವೀಕರಿಸಿ, ಕಾನೂನುಬದ್ಧವಾಗಿ ಸಾಧ್ಯವಿರುವ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

‘ಯಾವ ಅಧಿಕಾರಿಯ ಕಚೇರಿ ಎಲ್ಲಿದೆಯೋ, ಆ ಕೇಂದ್ರ ಸ್ಥಾನದಲ್ಲೇ ಅವರು ಕಡ್ಡಾಯವಾಗಿ ವಾಸ್ತವ್ಯ ಮಾಡಬೇಕು. ಅಧಿಕಾರಿಗಳು ವಾಸ್ತವ್ಯ ಮಾಡುತ್ತಿರುವುದಕ್ಕೆ ಮನೆ ಬಾಡಿಗೆ ಸೇರಿದಂತೆ ಅಗತ್ಯ ದಾಖಲೆಗಳು ಇರಬೇಕು. ಇದನ್ನು ಮೇಲಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು’ ಎಂದು ಸೂಚಿಸಿದರು.

‘ಗ್ರಾಮ ಪಂಚಾಯಿತಿಗೆ ಕೆಲಸಕ್ಕಾಗಿ ಬರುವ ಬಡ ಕೂಲಿ ಕಾರ್ಮಿಕರಿಗೆ ಅಧಿಕಾರಿಗಳು ಸಿಗದ ಕಾರಣ ಅಥಣಿಗೆ ಬಂದು ಅವರನ್ನು ಹುಡುಕುವ ಪರಿಸ್ಥಿತಿ ನಿರ್ಮಾಣ ವಾಗಬಾರದು. ಇದರಿಂದ ಅವರ ಒಂದು ದಿನದ ಕೂಲಿ, ಪ್ರಯಾಣದ ಹಣ ಮತ್ತು ಸಮಯ ವ್ಯರ್ಥವಾಗುತ್ತದೆ. ಈ ಪದ್ಧತಿ ನಿಲ್ಲಬೇಕು’ ಎಂದು ಹೇಳಿದರು.

ಪ್ರತಿ ಶನಿವಾರ ಹೋಬಳಿ ಮಟ್ಟದಲ್ಲಿ ಪ್ರಜಾ ಸೇವಾ ಆಂದೋಲನ ನಡೆಸಬೇಕು. ಸಾರ್ವಜನಿಕರಿಂದ ಸ್ವೀಕರಿಸುವ ಪ್ರತಿಯೊಂದು ಅರ್ಜಿಗೂ ಸ್ವೀಕೃತಿ ನೀಡಬೇಕು. ಅರ್ಜಿಯಲ್ಲಿರುವ ಸಮಸ್ಯೆಯನ್ನು ಸಾಧ್ಯವಾದಷ್ಟು ತಕ್ಷಣವೇ ಪರಿಹರಿಸಬೇಕು. ಸಾಧ್ಯವಾಗದಿದ್ದರೆ ಒಂದು ವಾರ, ಹತ್ತು ದಿನ ಅಥವಾ ಗರಿಷ್ಠ 15 ದಿನದೊಳಗೆ ಪರಿಹರಿಸುವ ಗಡುವು ನೀಡಬೇಕು. ಕಾನೂನಿನ ವ್ಯಾಪ್ತಿಗೆ ಬಾರದ ಅರ್ಜಿಗಳಿಗೆ ಕಾರಣವನ್ನು ಲಿಖಿತವಾಗಿ ತಿಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ಕುಂಟು ನೆಪ ಹೇಳಿ ಅರ್ಜಿಗಳನ್ನು ವಿಳಂಬ ಮಾಡುವುದಕ್ಕೆ ಅವಕಾಶವಿಲ್ಲ. ಜಾತಿ, ಮತ, ಪಕ್ಷದ ಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ಸೇವೆ ನೀಡಬೇಕು. ಅಧಿಕಾರಿಗಳ ಬಗ್ಗೆ ಸಾರ್ವಜನಿಕರಲ್ಲಿ ಗೌರವದ ಭಾವನೆ ಮೂಡುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು’ ಎಂದರು.

ಕಾರ್ಯಾಂಗ ಮತ್ತು ಶಾಸಕಾಂಗ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಆಡಳಿತ ಪರಿಣಾಮಕಾರಿಯಾಗಲು ಸಾಧ್ಯ. ಬಡವರು, ದುರ್ಬಲರು ಹಾಗೂ ಹಣ, ಜನಬಲ ಅಥವಾ ಪ್ರಭಾವ ಇಲ್ಲದವರ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿಕೊಡುವುದು ಅಧಿಕಾರಿಗಳ ಜವಾಬ್ದಾರಿ ಎಂದು ಹೇಳಿದರು.

‘ಇಂದು ಸ್ವೀಕರಿಸಿದ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗೆ ತಕ್ಷಣವೇ ಕಳುಹಿಸಿ, ಸಾಧ್ಯವಿರುವ ಕೆಲಸಗಳಿಗೆ ಇಂದೇ ಪರಿಹಾರ ನೀಡಬೇಕು. ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಮಟ್ಟದ ಅಧಿಕಾರಿಗಳ ಹಂತಕ್ಕೆ ಹೋಗಬೇಕಾದ ಅರ್ಜಿಗಳನ್ನು ಅದೇ ದಿನ ಕಳುಹಿಸಬೇಕು’ ಎಂದು ಸೂಚಿಸಿದರು.

ಮುಂದಿನ ಹಂತದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಅಥಣಿಗೆ ಕರೆಸಿ, ಸಾರ್ವಜನಿಕರಿಂದ ಸ್ವೀಕರಿಸಿದ ಅರ್ಜಿಗಳ ಪ್ರಗತಿ ಪರಿಶೀಲಿಸಲಾಗುವುದು. ವಿಳಂಬವಾಗಿರುವ ಅರ್ಜಿಗಳ ಕುರಿತು ಅಧಿಕಾರಿಗಳಿಂದ ನೇರವಾಗಿ ಮಾಹಿತಿ ಪಡೆಯಲಾಗುವುದು ಎಂದರು. ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಬಂದೋಬಸ್ತ್ ಕರ್ತವ್ಯ ಇರುವುದರಿಂದ ಜಿಲ್ಲಾ ಮಟ್ಟದ ಸಭೆಯನ್ನು ಮುಂದಿನ ನಿಗದಿತ ಶನಿವಾರ ನಡೆಸಲಾಗುವುದು ಎಂದು ತಿಳಿಸಿದರು.

ಪ್ರಜಾ ಸೇವಾ ಆಂದೋಲನವು ಕೇವಲ ಅರ್ಜಿ ಸ್ವೀಕರಿಸುವ ಕಾರ್ಯಕ್ರಮವಲ್ಲ. ಜನರ ಬದುಕಿನಲ್ಲಿ ಆಡಳಿತದ ಸ್ಪಂದನೆ ಕಾಣುವಂತೆ ಮಾಡುವ ಪ್ರಯತ್ನವಾಗಿದೆ. ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಚರಂಡಿ, ವಿದ್ಯುತ್, ನೀರಾವರಿ ಅಥವಾ ಕೈಗಾರಿಕೆಗಳ ನಿರ್ಮಾಣ ಮಾತ್ರವಲ್ಲ; ಬಡವರು ಮತ್ತು ಯುವಕರ ಅಗತ್ಯಗಳನ್ನು ಪೂರೈಸುವ ಮೂಲಕ ಸಾಮಾಜಿಕ ಅಭಿವೃದ್ಧಿಯನ್ನೂ ಸಾಧಿಸಬೇಕು ಎಂದರು.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕೈಗಾರಿಕೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (CSR) ಸೇರಿದಂತೆ ವಿವಿಧ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸವದಿ ಅವರು ಹೇಳಿದರು.

‘ನನಗೆ ವೈಯಕ್ತಿಕವಾಗಿ ಯಾವುದೇ ಅಪೇಕ್ಷೆ ಇಲ್ಲ. ನನ್ನ ಕ್ಷೇತ್ರದ ಜನರು ಪ್ರತಿನಿತ್ಯ ನಗುನಗುತ್ತಾ ಇರಬೇಕು. ಆಡಳಿತ ಎಂದರೆ ಹೀಗೆ ಇರಬೇಕು, ಅಧಿಕಾರಿಗಳು ಎಂದರೆ ಹೀಗೆ ಇರಬೇಕು ಎಂಬ ಮಾತು ಜನರ ಬಾಯಿಂದ ಬರಬೇಕು’ ಎಂದು ಅವರು ಹೇಳಿದರು.

‘ಪುರಸಭೆ, ತಾಲೂಕು ಪಂಚಾಯಿತಿ, ಕಂದಾಯ ಹಾಗೂ ಸಬ್‌ರಿಜಿಸ್ಟ್ರಾರ್ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಎದುರಾಗುವ ಸಮಸ್ಯೆಗಳ ಬಗ್ಗೆ ಮಾಹಿತಿ ಇದೆ. ಮುಂದೆ ಇಂತಹ ದೂರುಗಳು ಕೇಳಿಬರದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು’ ಎಂದು ಸೂಚಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಆಡಳಿತದಲ್ಲಿ ಹೊಸ ಚಿಂತನೆ ಹಾಗೂ ಕಾರ್ಯವೈಖರಿಗೆ ಒತ್ತು ನೀಡಲಾಗುತ್ತಿದೆ. ಪ್ರಜಾ ಸೇವಾ ಆಂದೋಲನದ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯವಸ್ಥೆ ಬಲಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪ ವಿಭಾಗಅಧಿಕಾರಿ ಸುಭಾಸ ಸಂಪಗಾಂವಿ,ತಹಸೀಲ್ದಾರ್ ಸಿದ್ರಾಯ ಬೋಸಗಿ, ಡಿವೈಎಸ್ಪಿ. ಪ್ರಶಾಂತ ಮುನ್ನೊಳಿ, ಪ್ರವೀಣ ಹುಣಸಿಕಟ್ಟಿ,ಶಿವಾನಂದ ಕಲ್ಲಾಪುರ, ಎಂ. ಆರ್. ಮುಂಜಿ, ಅಶೋಕ ಗುಡಿಮನಿ,ಮಹಾದೇವ ಬಿರಾದಾರ, ಸಿದ್ದಾರ್ತ್ ಶಿಂಗೆ, ಪುರಸಭೆ ಅಧ್ಯಕ್ಷೆ ಶಿವಲೀಲಾ ಬೂಟಾಳಿ, ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್ ಸೇರಿದಂತೆ ಸಮಸ್ತ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ವರದಿ: ಯಾಸಿನ್ ಝಾರೆ, ಅಥಣಿ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles