ಬೆಂಗಳೂರು: ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಬೆಂಗಳೂರು ವತಿಯಿಂದ ನೀಡಲಾಗುವ ರಾಜ್ಯಮಟ್ಟದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಆದಿ ಜಾಂಬವ ಕನ್ನಡ ಮಾಧ್ಯಮ ಪ್ರೌಢಶಾಲೆ, ಮುಂಡಗೋಡದ ಮುಖ್ಯ ಶಿಕ್ಷಕರಾದ ಶ್ರೀ. ಎಸ್. ಡಿ. ಮುಡೆಣ್ಣವರ ಅವರು ಭಾಜನರಾಗಿದ್ದು, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದರು.ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ, ಕನ್ನಡ ಭಾಷೆ–ಸಾಹಿತ್ಯದ ಬೆಳವಣಿಗೆಗೆ ನೀಡಿರುವ ಕೊಡುಗೆ ಹಾಗೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದನ್ನು ಪರಿಗಣಿಸಿ ಶ್ರೀ. ಎಸ್. ಡಿ. ಮುಡೆಣ್ಣವರ ಅವರನ್ನು ಈ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀಮತಿ ಜಿ. ಕೆ. ರಶ್ಮಿ, ಐಪಿಎಸ್, ಶ್ರೀ. ಎಸ್. ಆರ್. ವಿಜಯ್ ಸಮರ್ಥ, ಡಾ. ಶಾಂತರಾಜು, ಉಪನ್ಯಾಸಕರು, ಶ್ರೀ. ಎಂ. ತಿಮ್ಮಯ್ಯ, ಅಧ್ಯಕ್ಷರು, ಕರ್ನಾಟಕ ಕೈಗಾರಿಕ ಮತ್ತು ವಾಣಿಜ್ಯೋದ್ಯಮಗಳ ಕನ್ನಡಪರ ಸಂಘಟನೆಗಳ ಒಕ್ಕೂಟ, ಬೆಂಗಳೂರು, ಬೆಂಗಳೂರಿನ ಸಾಹಿತಿಗಳಾದ ಶ್ರೀ. ಬಿ. ಶೃಂಗೇಶ್ವರ, ಖ್ಯಾತ ಗಾಯಕರು ಹಾಗೂ ಸಮಾಜ ಸೇವಕರಾದ ಶ್ರೀಮತಿ ಗರಕಪಾಟಿ ವಿಜಯಲಕ್ಷ್ಮಿ ವೆಂಕಟ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಭಾರತಿ ಎಂ. ಪ್ರಕಾಶ ಅವರು ನಿರೂಪಿಸಿದರು. ಸಮಾರಂಭದಲ್ಲಿ ಸಾಹಿತ್ಯ, ಶಿಕ್ಷಣ, ಕಲೆ ಹಾಗೂ ಸಾಮಾಜಿಕ ಕ್ಷೇತ್ರದ ಗಣ್ಯರು ಭಾಗವಹಿಸಿ ಪ್ರಶಸ್ತಿ ಪುರಸ್ಕೃತರಾದ ಶ್ರೀ. ಎಸ್. ಡಿ. ಮುಡೆಣ್ಣವರ ಅವರಿಗೆ ಅಭಿನಂದನೆ ಹಾಗೂ ಶುಭಾಶಯಗಳನ್ನು ಸಲ್ಲಿಸಿದರು.ಶಿಕ್ಷಣ ಸಂಸ್ಥೆಯಿಂದ ಅಭಿನಂದನೆರಾಜ್ಯಮಟ್ಟದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಆದಿ ಜಾಂಬವ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ. ಎಸ್. ಫಕ್ಕಿರಪ್ಪ ಅವರು ಮುಖ್ಯ ಶಿಕ್ಷಕರಾದ ಶ್ರೀ. ಎಸ್. ಡಿ. ಮುಡೆಣ್ಣವರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಮುಡೆಣ್ಣವರ ಅವರ ಶೈಕ್ಷಣಿಕ ಸೇವೆ, ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲಿನ ಕಾಳಜಿ ಹಾಗೂ ಸಮಾಜಮುಖಿ ಕಾರ್ಯಗಳಿಗೆ ದೊರೆತ ಈ ಗೌರವವು ಆದಿ ಜಾಂಬವ ಶಿಕ್ಷಣ ಸಂಸ್ಥೆ ಹಾಗೂ ಮುಂಡಗೋಡ ತಾಲೂಕಿನ ಹೆಮ್ಮೆಯ ಸಂಗತಿಯಾಗಿದೆ ಎಂದು ಶ್ರೀ. ಎಸ್. ಫಕ್ಕಿರಪ್ಪ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ.

