ಚ ಕಿತ್ತೂರು: ಉಚ್ಚ ನ್ಯಾಯಾಲಯದ ಆದೇಶದಂತೆ ಬಣಜಿಗ ಸಮುದಾಯವನ್ನು ಶೈಕ್ಷಣಿಕ ಮೀಸಲಾತಿಯಂತೆಯೇ ಉದ್ಯೋಗ ಮೀಸಲಾತಿಯಲ್ಲೂ ‘ಪ್ರವರ್ಗ 2ಎ’ ಅಡಿಯಲ್ಲಿ ಪರಿಗಣಿಸಿ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಕಿತ್ತೂರು ಘಟಕದ ಪದಾಧಿಕಾರಿಗಳು ತಹಸೀಲ್ದಾರರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಮೈಸೂರು ಜಿಲ್ಲೆಯ ಕೊಳ್ಳೇಗಾಲದ ಶ್ರೀಮತಿ ಸುಮಿತ್ರಾ ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರ (ಪ್ರಕರಣ ಸಂಖ್ಯೆ: NC-2025-KHC15564, ದಿನಾಂಕ: 09/04/2025) ಪ್ರಕರಣದಲ್ಲಿ ಗೌರವಾನ್ವಿತ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಶ್ರೀಯುತ ಸುರೇಶ್ ಗೋವಿಂದರಾಜ್ ಅವರು ಮಹತ್ವದ ಆದೇಶ ನೀಡಿದ್ದಾರೆ. ಬಣಜಿಗ ಸಮುದಾಯವನ್ನು ಶಿಕ್ಷಣಕ್ಕಾಗಿ ಪ್ರವರ್ಗ 2ಎ ಅಡಿಯಲ್ಲಿ ಹಾಗೂ ಉದ್ಯೋಗಕ್ಕಾಗಿ ಪ್ರವರ್ಗ 2ಬಿ (ಗ್ರೂಪ್ ಡಿ) ಅಡಿಯಲ್ಲಿ ವರ್ಗೀಕರಿಸಿರುವುದು ಸಂವಿಧಾನದ ಪರಿಚ್ಛೇದ 16(4) ರ ಆಶಯಕ್ಕೆ ವಿರುದ್ಧವಾಗಿದೆ ಮತ್ತು ಉಲ್ಲಂಘನೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಉಚ್ಚ ನ್ಯಾಯಾಲಯವು ಸಂವಿಧಾನದ ಪರಿಚ್ಛೇದ 16(4) ರ ಅಡಿಯಲ್ಲಿ ಬಣಜಿಗ ಸಮುದಾಯವನ್ನು ಗ್ರೂಪ್ ‘ಡಿ’ ಬದಲಿಗೆ ಗ್ರೂಪ್ ‘ಬಿ’ (ಪ್ರವರ್ಗ 2ಎ) ಅಡಿಯಲ್ಲಿಯೇ ಮರು ವರ್ಗೀಕರಿಸಬೇಕೆಂದು ಆದೇಶಿಸಿದೆ. ಬಣಜಿಗ ಸಮುದಾಯದವರು ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿರುವುದರಿಂದ ಸರ್ಕಾರಿ ನೇಮಕಾತಿಗಳಲ್ಲಿ ಅರ್ಹ ಪ್ರಾತಿನಿಧ್ಯ ದೊರೆಯದೆ ವಂಚಿತರಾಗುತ್ತಿದ್ದಾರೆ.
ಆದ್ದರಿಂದ, ಉಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಿ, ಬಣಜಿಗ ಸಮುದಾಯಕ್ಕೆ ಉದ್ಯೋಗದಲ್ಲೂ ‘ಪ್ರವರ್ಗ 2ಎ’ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಕಿತ್ತೂರು ತಾಲೂಕು ಬಣಜಿಗ ಸಮಾಜದ ಪದಾಧಿಕಾರಿಗಳು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ
ಬಸಲಿಂಗಪ್ಪ ವಿ. ಶಹಾಪುರ,
ಪ್ರಧಾನ ಕಾರ್ಯದರ್ಶಿ ಮಂಜುನಾಥ ಹೆಚ್. ಅಂಗಡಿ,ಗೌರವ ಅಧ್ಯಕ್ಷ ಮಲ್ಲಿಕಾರ್ಜುನ ಬ. ಸಾಣಿಕೊಪ್ಪ,
ಕೋಶಾಧಿಕಾರಿ
ಮಹಾಂತೇಶ ವಿ. ಶೆಟ್ಟರ
ಹಾಗೂ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

