ಬಿಕೆ ಹರಿಪ್ರಸಾದ್ ಸಂಪುಟಕ್ಕೆ ಸೇರಿಸಿ ಡಿಸಿಎಂ ಹುದ್ದೆ ನೀಡಿ: ಅಹಿಂದ ಸಂಘಟನೆಯ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ ಆಗ್ರಹ
ಬೆಂಗಳೂರು,ಫೆ.10: ಶೋಷಿತರು, ಹಿಂದುಳಿದ ವರ್ಗಗಳು, ದಲಿತರು ಹಾಗೂ ಅಹಿಂದ ಸಮುದಾಯದ ಹಕ್ಕುಗಳಿಗಾಗಿ ನಿರಂತರವಾಗಿ ಧ್ವನಿ ಎತ್ತುತ್ತಿರುವ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ತಕ್ಷಣವೇ ರಾಜ್ಯ ಸಂಪುಟಕ್ಕೆ ಸೇರಿಸಿ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ರಾಷ್ಟ್ರೀಯ ಅಹಿಂದ ಸಂಘಟನೆಯ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿ.ಕೆ. ಹರಿಪ್ರಸಾದ್ ಅವರು ಕೇವಲ ರಾಜಕೀಯ ನಾಯಕರಷ್ಟೇ ಅಲ್ಲ, ಸಾಮಾಜಿಕ ನ್ಯಾಯದ ಹೋರಾಟಗಾರರಾಗಿದ್ದಾರೆ. ಜಾತಿ ಗಣತಿಯಂತಹ ಸಂವೇದನಾಶೀಲ ಹಾಗೂ ಐತಿಹಾಸಿಕ ಮಹತ್ವದ ವಿಷಯದಲ್ಲಿ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಶೋಷಿತ ಸಮುದಾಯಗಳ ಪರ ದಿಟ್ಟ ನಿಲುವು ತಳೆದಿದ್ದಾರೆ. ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಮೌಲ್ಯಗಳನ್ನು ರಾಜಕೀಯದ ಕೇಂದ್ರಬಿಂದುವಾಗಿಸಿಕೊಂಡು ಅವರು ನಡೆಸಿರುವ ಹೋರಾಟ ಅಹಿಂದ ಚಳವಳಿಗೆ ಬಲ ಬಂದಂತಾಗಿದೆ ಎಂದರು.
ಹಿಂದುಳಿದ ವರ್ಗದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರ ಆಡಳಿತಕ್ಕೆ ರಾಜಕೀಯವಾಗಿ ಮತ್ತು ನೈತಿಕವಾಗಿ ಬಲ ನೀಡುತ್ತಾ, ಪಕ್ಷದ ಒಳಗೂ ಹೊರಗೂ ಅಹಿಂದ ಧ್ವನಿಯನ್ನು ಸ್ಪಷ್ಟವಾಗಿ ಪ್ರತಿನಿಧಿಸಿದ ನಾಯಕರಲ್ಲಿ ಬಿ.ಕೆ. ಹರಿಪ್ರಸಾದ್ ಪ್ರಮುಖರಾಗಿದ್ದಾರೆ. ಇಂತಹ ನಾಯಕನನ್ನು ಸಂಪುಟಕ್ಕೆ ಸೇರಿಸುವುದು ಸರ್ಕಾರದ ವಿಶ್ವಾಸಾರ್ಹತೆಯನ್ನು ಇನ್ನಷ್ಟು ಹೆಚ್ಚಿಸುವ ಜೊತೆಗೆ, ಸ್ವಚ್ಛ ಆಡಳಿತದ ನೀಡಲು ಸಹಕಾರಿಯಾಗಲಿದೆ ಎಂದರು.
ಬಿ.ಕೆ. ಹರಿಪ್ರಸಾದ್ ಅವರು ಸಂಪುಟ ಸೇರಿದಲ್ಲಿ ಸರ್ಕಾರಕ್ಕೆ ಮಾತ್ರವಲ್ಲ, ಅಹಿಂದ ಸಂಘಟನೆಗಳಿಗೊ ಕೂಡ ಹೊಸ ಶಕ್ತಿ ತುಂಬಿದಂತೆ ಆಗಲಿದೆ. ಅಹಿಂದ ಸಮುದಾಯದ ಆಶಯಗಳು ಮತ್ತು ಹೋರಾಟಗಳು ಆಡಳಿತದ ಉನ್ನತ ಮಟ್ಟದಲ್ಲಿ ಪ್ರತಿಫಲಿಸುವ ವಿಶ್ವಾಸ ಜನರಲ್ಲಿ ಮೂಡಲಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಹಿಂದ ಸಮಾಜದ ವತಿಯಿಂದ ಸಭೆಗಳು, ಚರ್ಚೆಗಳು ಹಾಗೂ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಒಬಿಸಿ ಘಟಕದ ಅಧ್ಯಕ್ಷರಾದ ಮೋಹನ್ ಕುಮಾರ್, ರಾಜ್ಯ ಕಾರ್ಯಾಧ್ಯಕ್ಷರಾದ ಬಿ ಶಿವಣ್ಣ ಸೇರಿದಂತೆ ಅಹಿಂದ ಕಾರ್ಯಕರ್ತರು, ಬಿಕೆ ಹರಿಪ್ರಸಾದ್ ಬೆಂಬಲಿಗರು ಉಪಸ್ಥಿತರಿದ್ದರು.

