15.1 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಬೆಂಗಳೂರು: ಮಕ್ಕಳ ರಕ್ಷಣೆ ಹಾಗೂ ಸುರಕ್ಷತಾ ಕ್ರಮಗಳ ಕುರಿತು ರಾಜ್ಯ ಮಟ್ಟದ ಎರಡು ದಿನಗಳ ಕಾರ್ಯಗಾರ

ಬೆಂಗಳೂರು: ಮಕ್ಕಳ ರಕ್ಷಣೆ ಹಾಗೂ ಸುರಕ್ಷತಾ ಕ್ರಮಗಳ ಕುರಿತು ರಾಜ್ಯ ಮಟ್ಟದ ಎರಡು ದಿನಗಳ ಕಾರ್ಯಗಾರ

ಬೆಂಗಳೂರು, ಮಾ. 9: ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯ ಮಟ್ಟದ ಎರಡು ದಿನಗಳ ಕಾರ್ಯಗಾರವನ್ನು ಬೆಂಗಳೂರಿನ ಸಂತ ಜೋಸೆಫರ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಗಾರವನ್ನು ಲೊಯೋಲ ವಿಕಾಸ ಕೇಂದ್ರ ಮುಂಡಗೋಡ, ಸಂತ ಜೋಸೆಫರ ಕಾನೂನು ಮಹಾವಿದ್ಯಾಲಯ ಬೆಂಗಳೂರು, ಪಡಿ ಸಂಸ್ಥೆ ಮಂಗಳೂರು, ಚೈಲ್ಡ್ ರೈಟ್ಸ್ ಟ್ರಸ್ಟ್ ಬೆಂಗಳೂರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆ ಮತ್ತು ಅಎನ್ಎಐ ಸಂಸ್ಥೆಗಳು ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದವು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂತ ಜೋಸೆಫರ ಕಾನೂನು ಮಹಾವಿದ್ಯಾಲಯದ ನಿರ್ದೇಶಕರಾದ ಫಾ. ಜೆರಾಲ್ಡ್ ಡಿ’ಸೋಜ ಮಾತನಾಡಿ, ಮಕ್ಕಳ ರಕ್ಷಣೆ ಮತ್ತು ಸುರಕ್ಷತೆಯ ವಿಷಯದಲ್ಲಿ ಸಮಗ್ರವಾದ ನೆಟ್‌ವರ್ಕಿಂಗ್ ಅಗತ್ಯವಿದೆ ಎಂದು ಹೇಳಿದರು. “ಯಾವುದೇ ಕಾನೂನು ಏಕಮುಖವಾಗಿದ್ದರೆ ಅದರ ದುರ್ಬಳಕೆಗೆ ಅವಕಾಶಗಳು ಹೆಚ್ಚಾಗುತ್ತವೆ. ಮಕ್ಕಳ ಕುರಿತ ನಿರ್ಧಾರಗಳಲ್ಲಿ ಮಕ್ಕಳಿಗೂ ಪಾತ್ರ ನೀಡಬೇಕು. ಕೇವಲ ಏಸಿ ಕೊಠಡಿಗಳಲ್ಲಿ ಕುಳಿತು ನೀತಿಗಳನ್ನು ರೂಪಿಸುವುದರಿಂದ ಸಮಸ್ಯೆಗಳ ಪರಿಹಾರ ಸಾಧ್ಯವಿಲ್ಲ. ನೆಲಮಟ್ಟದ ಅನುಭವದ ಆಧಾರದ ಮೇಲೆ ಮಕ್ಕಳ ರಕ್ಷಣೆಗಾಗಿ ಸಮನ್ವಯದ ಕೆಲಸ ನಡೆಯಬೇಕು,” ಎಂದು ಅವರು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಲೊಯೋಲ ವಿಕಾಸ ಕೇಂದ್ರ ಮುಂಡಗೋಡದ ನಿರ್ದೇಶಕರಾದ ಫಾ. ಅನಿಲ್ ಡಿ’ಸೋಜ, ನಾರ್ಥ್ ಕರ್ನಾಟಕ ಜೆಸ್ವಿಟ್ಸ್ ಎಜ್ಯುಕೇಶನಲ್ ಅಂಡ್ ಚಾರಿಟೇಬಲ್ ಸೊಸೈಟಿ ಕಳೆದ 40 ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕುಗಳಲ್ಲಿ ಶಿಕ್ಷಣ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದರು. ಅದರ ಅಂಗ ಸಂಸ್ಥೆಯಾದ ಲೊಯೋಲ ವಿಕಾಸ ಕೇಂದ್ರವು ಗ್ರಾಮೀಣ ಭಾಗದ ಬಡ, ದುರ್ಬಲ, ಅವಕಾಶ ವಂಚಿತ, ಬುಡಕಟ್ಟು ಹಾಗೂ ಅರಣ್ಯವಾಸಿ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಸಮುದಾಯದ ಸಹಭಾಗಿತ್ವದೊಂದಿಗೆ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ವಿವರಿಸಿದರು. ಮಕ್ಕಳ ರಕ್ಷಣೆ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಇನ್ನಷ್ಟು ತಿಳಿದುಕೊಳ್ಳುವ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಗೆ ಒಟ್ಟಾಗಿ ಪರಿಣಾಮಕಾರಿ ಕಾರ್ಯತಂತ್ರ ರೂಪಿಸುವ ಉದ್ದೇಶದಿಂದ ಈ ಕಾರ್ಯಗಾರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಚೈಲ್ಡ್ ರೈಟ್ಸ್ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕರಾದ ಡಾ. ವಾಸುದೇವ ಶರ್ಮಾ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ಕೆ.ಟಿ. ತಿಪ್ಪೇಸ್ವಾಮಿ, ಮಂಗಳೂರಿನ ಪಡಿ ಸಂಸ್ಥೆಯ ಸಿಇಒ ಶ್ರೀ ರೆನ್ನಿ ಡಿ’ಸೋಜ, ಸಿವಿಕ್ ಬೆಂಗಳೂರು ಸಂಸ್ಥೆಯ ಶ್ರೀಮತಿ ಕಾತ್ಯಾಯನಿ ಚಾಮರಾಜ ಹಾಗೂ ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕರಾದ ಡಾ. ಕೆ. ರಾಘವೇಂದ್ರ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಳು ಮಕ್ಕಳ ಹಕ್ಕುಗಳ ವಿವಿಧ ಆಯಾಮಗಳು, ಮಕ್ಕಳ ರಕ್ಷಣೆಯ ಅಗತ್ಯತೆ, ಭಾರತ ಸಂವಿಧಾನದಲ್ಲಿ ಮಕ್ಕಳಿಗೆ ನೀಡಿರುವ ಹಕ್ಕುಗಳು ಹಾಗೂ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ (1989)ಯ ಪರಿಚ್ಛೇದ 19 ಸೇರಿದಂತೆ ವಿವಿಧ ಕಾನೂನು ಮತ್ತು ಕಾಯ್ದೆಗಳ ಕುರಿತು ವಿವರಿಸಿದರು. ಮಕ್ಕಳ ಹಕ್ಕುಗಳ ಉಲ್ಲಂಘನೆ ಸಂಭವಿಸಿದಲ್ಲಿ ದೂರು ಸಲ್ಲಿಸುವ ವಿಧಾನಗಳು ಹಾಗೂ ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳ ಜವಾಬ್ದಾರಿಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಇದೇ ಸಂದರ್ಭದಲ್ಲಿ ಮಕ್ಕಳ ರಕ್ಷಣೆ ಮತ್ತು ಸುರಕ್ಷತಾ ಕ್ರಮಗಳ ಕುರಿತು ಸಂವಾದ ಕಾರ್ಯಕ್ರಮವನ್ನು ಪಡಿ ಸಂಸ್ಥೆಯ ಸಿಇಒ ಶ್ರೀ ರೆನ್ನಿ ಡಿ’ಸೋಜ ನಡೆಸಿಕೊಟ್ಟರು. ಬೆಂಗಳೂರು ಕಾರ್ಮಿಕ ಇಲಾಖೆಯ ಅಧಿಕಾರಿ ಶ್ರೀಮತಿ ಮಂಜುಳಾ ಹಾಗೂ ಜಿಲ್ಲಾ ಮಟ್ಟದ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕಿ ಶ್ರೀಮತಿ ಹೇಮಾವತಿ ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಮಕ್ಕಳ ಸಮಸ್ಯೆಗಳ ಕುರಿತು ಪ್ರಶ್ನೆಗಳಿಗೆ ಉತ್ತರಿಸಿದರು.

ಎರಡು ದಿನಗಳ ಕಾರ್ಯಗಾರದಲ್ಲಿ ಶ್ರೀಮತಿ ಮಂಗಳಾ ಮೋರೆ ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀ ಭರಮಣ್ಣ ಚಕ್ರಸಾಲಿ ಸಂಗಡಿಗರು ಮಕ್ಕಳ ಜಾಗೃತಿ ಹಾಡನ್ನು ಹಾಡಿ ಗಮನ ಸೆಳೆದರು. ತೇಜಸ್ವಿನಿ ಬೇಗೂರು ಅವರು ಭಾರತ ಸಂವಿಧಾನದ ಪ್ರಸ್ತಾವನೆಯನ್ನು ವಾಚಿಸಿದರು. ಶ್ರೀ ನಾಗರಾಜ ಕಟ್ಟಿಮನಿ ಸ್ವಾಗತಿಸಿದರು ಹಾಗೂ ಶ್ರೀ ಮೈಲಾರಿ ಜಾಡರ್ ವಂದಿಸಿದರು. ಲೊಯೋಲ ವಿಕಾಸ ಕೇಂದ್ರದ ದೀಪಾ ಕೊಳುರು ಕಾರ್ಯಗಾರದ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಿದರು.

ಈ ಕಾರ್ಯಗಾರದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾಮಾಜಿಕ ಕಾರ್ಯಕರ್ತರು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪ್ರತಿನಿಧಿಗಳು ಭಾಗವಹಿಸಿದ್ದರು. ಮಕ್ಕಳ ರಕ್ಷಣೆ ಮತ್ತು ಸುರಕ್ಷತೆ ಕುರಿತಾಗಿ ಜಾಗೃತಿ ಮೂಡಿಸುವಲ್ಲಿ ಈ ಕಾರ್ಯಗಾರ ಮಹತ್ವದ ಹೆಜ್ಜೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles