ಮಕ್ಕಳ ಶಾಲಾ ಶುಲ್ಕ ಕಟ್ಟಲು ಹಣವಿಲ್ಲದೆ ತಾಳಿ ಅಡವಿಟ್ಟ ನರೇಗಾ ನೌಕರರು
ಬಾಗಲಕೋಟೆ:ನರೇಗಾ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇದರಿಂದ ಅನೇಕ ಗ್ರಾಮೀಣ ಬಡ ಜನರು ಬದುಕು ಕಟ್ಟಿಕೊಂಡಿದ್ದಾರೆ. ನರೇಗಾ ಯೋಜನೆಗೆ ಹೊರಗುತ್ತಿಗೆ ಆಧಾರದ ಮೇಲೆ ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ. ನರೇಗಾ ಯಶಸ್ವಿಯಾಗಲು ಹೊರಗುತ್ತಿಗೆ ನೌಕರರ ಶ್ರಮ ಸಾಕಷ್ಟಿದೆ. ಆದರೆ, ಈ ನೌಕರರಿಗೆ ಕಳೆದ ಏಳು ತಿಂಗಳಿಂದ ವೇತನ ನೀಡಿಲ್ಲ. ಹೀಗಾಗಿ, ನೌಕರರು ಹೋರಾಟದ ಹಾದಿ ಹಿಡಿದಿದ್ದಾರೆ.
“ಮಕ್ಕಳ ಶಾಲಾ ಶುಲ್ಕ ಕಟ್ಟಲು ತಾಳಿ ಅಡವಿಟ್ಟಿದ್ದೇನೆ. ಕಳೆದ ಆರು ತಿಂಗಳಿಂದ ಹಾಲಿನ ಹಣ ಕೊಡುವುದಕ್ಕೆ ದುಡ್ಡಿಲ್ಲದಂತಾಗಿದೆ. ಮನೆ ಬಾಡಿಗೆ ಕಟ್ಟಲು ಹಣವಿಲ್ಲದೆ ಮನೆ ಬದಲಾಯಿಸುತ್ತಿದ್ದೇನೆ. ವೇತನ ಇಲ್ಲದಿದ್ದಕ್ಕೆ ಎಲ್ಲಿಯೂ ಒಂದು ರೂಪಾಯಿ ಸಾಲ ದೊರೆಯುತ್ತಿಲ್ಲ. ಆದಷ್ಟು ಬೇಗ ನಮಗೆ ವೇತನ ನೀಡಿ ನಮ್ಮ ಕುಟುಂಬ ರಕ್ಷಿಸಿ” ಎಂದು ಮಹಿಳಾ ಸಿಬ್ಬಂದಿ ರೇಣುಕಾ ಅಳಲು ತೋಡಿಕೊಂಡಿದ್ದಾರೆ.

