14.7 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಮದ್ಯಪಾನ, ಮಾದಕ ವಸ್ತುಗಳ ವ್ಯಸನವು ದೇಶದ ಭವಿಷ್ಯಕ್ಕೂ ಗಂಭೀರ ಸವಾಲು: ಶರಣಪ್ಪ ಸಲಾದಪುರ

ಮದ್ಯಪಾನ, ಮಾದಕ ವಸ್ತುಗಳ ವ್ಯಸನವು ದೇಶದ ಭವಿಷ್ಯಕ್ಕೂ ಗಂಭೀರ ಸವಾಲು: ಶರಣಪ್ಪ ಸಲಾದಪುರ

ಬೆಂಗಳೂರು, ಜುಲೈ 5: ಮದ್ಯಪಾನ ಮತ್ತು ಮಾದಕ ವಸ್ತುಗಳ ವ್ಯಸನವು ಕೇವಲ ವ್ಯಕ್ತಿಯ ಆರೋಗ್ಯವನ್ನಷ್ಟೇ ಅಲ್ಲ, ಕುಟುಂಬದ ನೆಮ್ಮದಿ, ಸಮಾಜದ ಶಾಂತಿ ಮತ್ತು ದೇಶದ ಭವಿಷ್ಯಕ್ಕೂ ಗಂಭೀರ ಸವಾಲಾಗಿ ಪರಿಣಮಿಸಿದೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ನಿಷೇಧ ಮತ್ತು ವ್ಯಸನಮುಕ್ತಿ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಪುರ ಕಳವಳ ವ್ಯಕ್ತಪಡಿಸಿದರು.

ನಗರದ ಕೆಂಗೇರಿಯ ಸಮೀಪದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ನಿಷೇಧ ಮತ್ತು ವ್ಯಸನಮುಕ್ತಿ ಮಂಡಳಿ, ಗಾಂಧೀ ಸ್ಮಾರಕ ನಿಧಿ ಹಾಗೂ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮದ್ಯಪಾನ ಮತ್ತು ಮಾದಕ ವಸ್ತುಗಳ ವ್ಯಸನವು ವ್ಯಕ್ತಿಯ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಜೀವನವನ್ನು ಕುಸಿತದತ್ತ ತಳ್ಳುತ್ತಿದೆ. ಇದರ ಪರಿಣಾಮವಾಗಿ ಕುಟುಂಬಗಳಲ್ಲಿ ಬಡತನ, ಕಲಹ, ಕೌಟುಂಬಿಕ ಹಿಂಸೆ, ಮಾನಸಿಕ ಒತ್ತಡ ಹಾಗೂ ಸಾಮಾಜಿಕ ಅಸಮಾಧಾನ ಹೆಚ್ಚುತ್ತಿದ್ದು, ಅನೇಕ ಕುಟುಂಬಗಳು ತಮ್ಮ ಸಂತೋಷ ಮತ್ತು ನೆಮ್ಮದಿಯನ್ನು ಕಳೆದುಕೊಳ್ಳುತ್ತಿವೆ ಎಂದು ಅವರು ಹೇಳಿದರು.

ವ್ಯಸನಮುಕ್ತ ಸಮಾಜ ನಿರ್ಮಾಣವು ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಅದು ಪ್ರತಿಯೊಬ್ಬ ನಾಗರಿಕ, ಪೋಷಕರು, ಶಿಕ್ಷಕರು, ಧಾರ್ಮಿಕ ಮುಖಂಡರು ಹಾಗೂ ಸಮಾಜದ ಎಲ್ಲ ವರ್ಗಗಳವರ ಸಾಮೂಹಿಕ ಹೊಣೆಗಾರಿಕೆಯಾಗಿದೆ. ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವುದು, ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವುದು ಮತ್ತು ವ್ಯಸನದ ದುಷ್ಪರಿಣಾಮಗಳ ಬಗ್ಗೆ ನಿರಂತರ ಜಾಗೃತಿ ಮೂಡಿಸುವ ಮೂಲಕವೇ ಈ ಪಿಡುಗನ್ನು ಪರಿಣಾಮಕಾರಿಯಾಗಿ ತಡೆಯಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾದ ಡಾ. ವೂಡೇ ಪಿ.ಕೃಷ್ಣ ಅವರು ಮಾತನಾಡಿ ಇಂದಿನ ಯುವಜನರು ಮತ್ತು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳ ದುರುಪಯೋಗ ಹೆಚ್ಚುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಇದರ ಪರಿಣಾಮವಾಗಿ ಅನೇಕ ಪ್ರತಿಭಾವಂತ ಯುವಕರು ಶಿಕ್ಷಣ, ಉದ್ಯೋಗ ಹಾಗೂ ಉಜ್ವಲ ಭವಿಷ್ಯದ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಅದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಮದ್ಯಪಾನ ಮತ್ತು ಮಾದಕ ವಸ್ತುಗಳ ವ್ಯಸನಾದ ವಿರುದ್ಧ ಹೋರಾಡಲು ರಾಯಭಾರಿಯಾಗಿ ಕೆಲಸವನ್ನು ಮಾಡಲು ಮುಂದಾಗುವ ಮೂಲಕ ಆರೋಗ್ಯವಂತ ಸಮಾಜ ಹಾಗೂ ಸದೃಢ ದೇಶ ನಿರ್ಮಾಣಕ್ಕೆ ಸಹಕಾರಿ ಆಗಬೇಕು ಎಂದು ಕರೆ ನೀಡಿದರು.

ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಡಿ.ಆರ್. ಪಾಟೀಲ್ ಅವರು ಮಾತನಾಡಿ, ಮದ್ಯ ಮತ್ತು ಮಾದಕ ವಸ್ತುಗಳ ವಿರುದ್ಧ ಮಕ್ಕಳಿಗೆ ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಉತ್ತಮ ರೀತಿಯಲ್ಲಿ ಮಾರ್ಗದರ್ಶನ ನೀಡುವಂತಹ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ, ಶಿಕ್ಷಕರ ನೇಮಕಾತಿಯಲ್ಲಿ ಕೇವಲ ಶೈಕ್ಷಣಿಕ ಅರ್ಹತೆ ಮತ್ತು ಅಂಕಗಳಿಗೆ ಮಾತ್ರ ಆದ್ಯತೆ ನೀಡುವುದು ಸಾಕಾಗುವುದಿಲ್ಲ. ಅಭ್ಯರ್ಥಿಯ ವ್ಯಕ್ತಿತ್ವ, ನೈತಿಕ ಮೌಲ್ಯಗಳು, ಮಕ್ಕಳೊಂದಿಗೆ ವರ್ತಿಸುವ ವಿಧಾನ, ಸಂವಹನ ಕೌಶಲ್ಯ ಹಾಗೂ ಬೋಧನೆಯ ಮೇಲಿನ ಬದ್ಧತೆಯನ್ನೂ ಸಮಾನವಾಗಿ ಪರಿಗಣಿಸಬೇಕು. ಏಕೆಂದರೆ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಪ್ರಮುಖ ಶಕ್ತಿಯಾಗಿದ್ದಾರೆ. ಆದ್ದರಿಂದ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಈ ಅಂಶಗಳನ್ನು ಮೌಲ್ಯಮಾಪನ ಮಾಡುವ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತರುವ ನಿಟ್ಟಿನಲ್ಲಿ ಕಾರ್ಯವಾಗಬೇಕು ಎಂದು ತಿಳಿಸಿದರು.

ಅಳಂದ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಆರ್.ಪಾಟೀಲ್ ಅವರು ಮಾತನಾಡಿ ಮದ್ಯಪಾನದಿಂದ ಉಂಟಾಗುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಆರೋಗ್ಯ ಸಂಬಂಧಿ ದುಷ್ಪರಿಣಾಮಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ದೇಶದ ಎಲ್ಲಾ ರಾಜ್ಯಗಳಲ್ಲಿ ಸಂಪೂರ್ಣ ಮದ್ಯಪಾನ ನಿಷೇಧ ಜಾರಿಗೊಳಿಸುವ ಕುರಿತು ಕೇಂದ್ರ ಸರ್ಕಾರ ಸಮಗ್ರ ನೀತಿ ರೂಪಿಸಬೇಕಾಗಿದೆ. ಆರೋಗ್ಯವಂತ, ವ್ಯಸನಮುಕ್ತ ಹಾಗೂ ಸದೃಢ ಸಮಾಜ ನಿರ್ಮಾಣಕ್ಕಾಗಿ ಈ ದಿಸೆಯಲ್ಲಿ ದೃಢವಾದ ಕ್ರಮಗಳನ್ನು ಕೈಗೊಳ್ಳುವುದು ಕಾಲದ ಅಗತ್ಯವಾಗಿದೆ ಎಂದು ಅವರು ಹೇಳಿದರು.

ಇಳಕಲ್‌ನ ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಅವರು ಮಾತನಾಡಿ ವಿದ್ಯಾರ್ಥಿಗಳು ದೇಶದ ಭವಿಷ್ಯದ ನಿರ್ಮಾತೃಗಳು. ಆದ್ದರಿಂದ ಅವರ ಮದ್ಯಪಾನ, ಮಾದಕ ವಸ್ತುಗಳ ಬಳಕೆ ಮತ್ತು ಇತರ ಕೆಟ್ಟ ವ್ಯಸನಗಳಿಂದ ದೂರವಿರಬೇಕು. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಒಳ್ಳೆಯ ಪೌಷ್ಟಿಕಾಂಶ ಹಾಗೂ ಸಮತೋಲನಯುತ ಆಹಾರವನ್ನು ಸೇವಿಸುವುದರ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಬೇಕು. ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯಕ್ಕೂ ಸಮಾನ ಮಹತ್ವ ನೀಡಿ ಎಂದು ಹೇಳಿದ ಅವರು ವಿದ್ಯಾರ್ಥಿಗಳೇ ಸಮಾಜಕ್ಕೆ ಮಾದರಿಯಾಗಿ, ದೇಶದ ಅಭಿವೃದ್ಧಿ ಮತ್ತು ಪ್ರಗತಿಗೆ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡುವ ಆದರ್ಶ ನಾಗರಿಕರಾಗುತ್ತಾರೆ ಎಂದು ಕರೆ ನೀಡಿದರು.

ಭಾಲ್ಕಿಯ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು ಸ್ವಾಮೀಜಿಯವರು ಮಾತನಾಡಿ
ಮದ್ಯ ಮತ್ತು ಮಾದಕ ವಸ್ತುಗಳಂತಹ ದುಶ್ಚಟಗಳನ್ನು ತ್ಯಜಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇಂತಹ ವ್ಯಸನಗಳು ವ್ಯಕ್ತಿಯ ಆರೋಗ್ಯ, ಕುಟುಂಬದ ನೆಮ್ಮದಿ ಹಾಗೂ ಸಮಾಜದ ಅಭಿವೃದ್ಧಿಗೆ ಹಾನಿ ಉಂಟುಮಾಡುತ್ತವೆ. ಆದ್ದರಿಂದ ನಾವು ಎಲ್ಲರೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು, ಉತ್ತಮ ಅಭ್ಯಾಸಗಳನ್ನು ಬೆಳೆಸಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ. ಆರೋಗ್ಯವಂತ ನಾಗರಿಕರಿಂದಲೇ ಸದೃಢ, ಸಮೃದ್ಧ ಮತ್ತು ಪ್ರಗತಿಪರ ದೇಶ ನಿರ್ಮಾಣ ಸಾಧ್ಯ ಎಂದರು.

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿಶ್ಚಲಾನಂದನಾಥ ಸ್ವಾಮೀಜಿಗಳು ಮಾತನಾಡಿ ಶತ್ರು ರಾಷ್ಟ್ರಗಳು ನಮ್ಮ ಯುವಶಕ್ತಿಯನ್ನು ದುರ್ಬಳಕೆ ಮಾಡಿಕೊಂಡು ದೇಶವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಮದ್ಯ ಮತ್ತು ಮಾದಕ ವಸ್ತುಗಳ ಅಕ್ರಮ ಸಾಗಣೆಗೆ ವಿವಿಧ ಪ್ರಯತ್ನಗಳನ್ನು ನಡೆಸುತ್ತಿವೆ. ಇಂತಹ ದುಷ್ಟ ಸಂಚುಗಳನ್ನು ವಿಫಲಗೊಳಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ವಿಶೇಷವಾಗಿ ವಿದ್ಯಾರ್ಥಿಗಳು ಇಂತಹ ವಸ್ತುಗಳಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಆರೋಗ್ಯವಂತ, ಜಾಗೃತ ಮತ್ತು ಶಿಸ್ತುಬದ್ಧ ಯುವಜನತೆ ಬಲಿಷ್ಠ ರಾಷ್ಟ್ರದ ಅಡಿಪಾಯ. ಆದ್ದರಿಂದ ನಾವು ಎಲ್ಲರೂ ಒಟ್ಟಾಗಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಿ, ದೇಶದ ಭವಿಷ್ಯವನ್ನು ಸುರಕ್ಷಿತ, ಸದೃಢ ಮತ್ತು ಆರೋಗ್ಯಕರವಾಗಿಸೋಣ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಕೋಶಾಧ್ಯಕ್ಷರಾದ ಹೆಚ್. ಬಿ. ದಿನೇಶ್ ಅವರು ವಿದ್ಯಾರ್ಥಿಗಳಿಗೆ ಮದ್ಯಪಾನ ಹಾಗೂ ಮಾದಕ ವಸ್ತುಗಳಿಂದ ದೂರವಿರುವ ಮಹತ್ವವನ್ನು ವಿವರವಾಗಿ ತಿಳಿಸಿದರು ಮತ್ತು ಅವುಗಳನ್ನು ಜೀವನದಲ್ಲಿ ಸಂಪೂರ್ಣವಾಗಿ ತ್ಯಜಿಸುವಂತೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಕಾರ್ಯಕ್ರಮದಲ್ಲಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷರಾದ ಶಶಿಧರ್ ಎಸ್. ಕೋಸಂಬೆ, , ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಂಡಳಿಯ ಮಾಜಿ ನಿರ್ದೇಶಕರಾದ ಗಿರಿಗೌಡರ್, ರಾಜ್ಯ ಮಾಹಿತಿ ಆಯುಕ್ತರಾದ ಡಾ. ಬಿ.ಆರ್. ಮಮತಾ, ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷರಾದ ಎಚ.ಎನ್. ಕೃಷ್ಣ, ಪಂಚಾಯತ್ ರಾಜ್ ಇಲಾಖೆಯ ಮಾಜಿ ನಿರ್ದೇಶಕರಾದ ಕೆಂಪೇಗೌಡ, ಹಿರಿಯ ಗಾಂಧಿವಾದಿ ನಿವೃತ್ತ ಉಪನ್ಯಾಸಕರಾದ ಪ್ರೊ. ಜಿ.ಬಿ. ಶಿವರಾಜು, ಕರ್ನಾಟಕ ಗಾಂಧೀ ಸ್ಮಾರಕ ನಿಧಿಯ ಕಾರ್ಯದರ್ಶಿ ಎಂ.ಸಿ. ನರೇಂದ್ರ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ಎನ್‌.ಎಸ್.ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles