14.9 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಮಿಮ್ಸ್ ಭೂ ಒತ್ತುವರಿ ತೆರವು ಹಾಗೂ ಅಕ್ರಮಗಳ ವಿರುದ್ಧ ಗುಡುಗಿದ ಸಚಿವ ಚಲುವರಾಯಸ್ವಾಮಿ; ಸಮಸ್ಯೆ ಇತ್ಯರ್ಥಕ್ಕೆ ಗಡುವು ನಿಗದಿ

​ಮಂಡ್ಯ (ಸೆ.15)

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) ಜಾಗ ಅತಿಕ್ರಮಣ, ಸ್ಲಂ ಬೋರ್ಡ್ ವಸತಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಾಗೂ ಅನಧಿಕೃತ ವಿದ್ಯುತ್ ಸಂಪರ್ಕ ಜಾಲದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರ ಕೂಗಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಸ್ಪಂದಿಸಿ, ಸಮಸ್ಯೆ ಇತ್ಯರ್ಥಕ್ಕೆ ಗಡುವು ನೀಡಿದ್ದಾರೆ.

ಕಳೆದ ಕೆಲ ದಿನಗಳಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರವೀಂದ್ರ, ನಾಗಣ್ಣಗೌಡ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ನಡೆಸುತ್ತಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರ ಭರವಸೆಯ ಮೇರೆಗೆ ಹಿಂಪಡೆಯಲಾಗಿದ್ದು, ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಸಭೆಯಲ್ಲಿ ಸಚಿವರು ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿ ಕಟ್ಟುನಿಟ್ಟಿನ ಕ್ರಮದ ಭರವಸೆ ನೀಡಿದರು.

​ಕಾನೂನು ಸಮರ ಮತ್ತು ಒತ್ತುವರಿ ತೆರವಿಗೆ ಕ್ರಮ
ಮಂಡ್ಯದ ಮೀಮ್ಸ್ ಆಸ್ಪತ್ರೆಗೆ ಸೇರಿದ ಜಾಗವು ಒತ್ತುವರಿಯಾಗಿರುವ ಬಗ್ಗೆ ನ್ಯಾಯಾಲಯದಲ್ಲಿರುವ ತಾತ್ಕಾಲಿಕ ತಡೆಯಾಜ್ಞೆಯನ್ನು ತೆರವುಗೊಳಿಸಲು ಅಡ್ವೊಕೇಟ್ ಜನರಲ್ (ಎಜಿ) ಅವರೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಲಾಗಿದೆ. ಸ್ಲಂ ಬೋರ್ಡ್, ನಗರಸಭೆ, ಕಾನೂನು ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಜತೆ ಬೆಂಗಳೂರಿನಲ್ಲಿ ಶೀಘ್ರವೇ ಉನ್ನತ ಮಟ್ಟದ ಸಭೆ ನಡೆಸಿ, ನವೆಂಬರ್ ಅಥವಾ ಡಿಸೆಂಬರ್ ಅಂತ್ಯದೊಳಗೆ ನ್ಯಾಯಾಲಯದ ಮುಂದೆ ಸಮರ್ಥ ವಾದ ಮಂಡಿಸಿ ಕಾನೂನು ಚೌಕಟ್ಟಿನಲ್ಲಿ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

​ಅನಧಿಕೃತ ವಿದ್ಯುತ್ ಸಂಪರ್ಕ ಕಡಿತ ಹಾಗೂ ಹಣ ವಸೂಲಿ
ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದು ಸರ್ಕಾರಕ್ಕೆ ಕೋಟಿಗಟ್ಟಲೆ ನಷ್ಟ ಉಂಟುಮಾಡಿರುವ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಅಕ್ರಮ ಸಂಪರ್ಕ ಹೊಂದಿರುವವರಿಗೆ ತಕ್ಷಣವೇ ನೋಟಿಸ್ ಜಾರಿ ಮಾಡಿ ಸಂಪರ್ಕ ಕಡಿತಗೊಳಿಸಲು ಹಾಗೂ ಸರ್ಕಾರಕ್ಕೆ ನಷ್ಟವಾಗಿರುವ ಸಂಪೂರ್ಣ ಮೊತ್ತವನ್ನು ಅವರಿಂದಲೇ ವಸೂಲಿ ಮಾಡಲು ಚೆಸ್ಕಾಂ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು‌.

​ಸಿಐಡಿ ತನಿಖೆಗೆ ಮುಖ್ಯಮಂತ್ರಿಗಳ ಜತೆ ಚರ್ಚೆ
ಮೀಮ್ಸ್ ವಿಚಾರದಲ್ಲಿ ಅಧಿಕಾರಿಗಳು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆಯೇ ಎಂಬ ಬಗ್ಗೆ ಸಮಗ್ರ ಪರಿಶೀಲನೆ ನಡೆಸಲಾಗುವುದು. ಜಿಲ್ಲಾಧಿಕಾರಿಗಳಿಂದ ಪ್ರಾಥಮಿಕ ವರದಿ ಪಡೆದು, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

​1,000 ಹಾಸಿಗೆಗಳ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣದ ಸಂಕಲ್ಪ
ಈ ಹಿಂದೆ ಆರೋಗ್ಯ ಸಚಿವನಾಗಿದ್ದಾಗಲೇ ಮಂಡ್ಯಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿದ್ದು, ಈಗ ಇದನ್ನು 1,000 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಜಿಲ್ಲೆಯ ಎಲ್ಲ ಏಳು ಶಾಸಕರು ಹಾಗೂ ಮೂವರು ಎಂಎಲ್ಸಿಗಳ ನಿಯೋಗದೊಂದಿಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಈಗಾಗಲೇ ಬಿಡುಗಡೆಯಾಗಿರುವ ಅನುದಾನದಲ್ಲಿ ನೂತನ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದರ ಜೊತೆಗೆ ಅಗತ್ಯ ವೈದ್ಯರ ನೇಮಕಕ್ಕೆ ಆರೋಗ್ಯ ಸಚಿವರ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

​ಪರಿಹಾರಕ್ಕೆ ಒಂದು ವಾರದ ಗಡುವು (ಡೆಡ್‌ಲೈನ್)
“ಇಲ್ಲಿ ನಾನು ಕಾಲಹರಣ ಮಾಡಲು ಸಭೆ ನಡೆಸಿಲ್ಲ. ನನ್ನ ಮೇಲೆ ಭರವಸೆಯಿಟ್ಟು ಒಂದು ಅವಕಾಶ ಕೊಡಿ” ಎಂದ ಸಚಿವರು, ಎಲ್ಲ ಸಮಸ್ಯೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಪರಿಹರಿಸಲು ಒಂದು ವಾರದ ಕಾಲಾವಕಾಶ ಕೋರಿದ್ದು, ಶೀಘ್ರದಲ್ಲೇ ಸ್ಪಷ್ಟ ಡೆಡ್‌ಲೈನ್ ಪ್ರಕಟಿಸುವುದಾಗಿ ಪ್ರಕಟಿಸಿದರು.

​ಪ್ರಜಾಪ್ರಭುತ್ವದಲ್ಲಿ ಹೋರಾಟ ಎಲ್ಲರ ಹಕ್ಕಾಗಿದ್ದರೂ, ಪ್ರತಿಭಟನೆಗೆ ಅವಕಾಶ ನೀಡದ ರೀತಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ ಎಂದ ಸಚಿವರು, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಸಂಘಟನೆಗಳೊಂದಿಗೆ ಮೈಶುಗರ್ ಕಾರ್ಖಾನೆ, ಅಚ್ಚುಕಟ್ಟು ಪ್ರದೇಶ ಹಾಗೂ ಕೆಆರ್‌ಎಸ್ ವ್ಯಾಪ್ತಿಯ ಜ್ವಲಂತ ಸಮಸ್ಯೆಗಳ ಕುರಿತು ಪ್ರತ್ಯೇಕ ಸುದೀರ್ಘ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವುದಾಗಿ ಆಶ್ವಾಸನೆ ನೀಡಿದರು.

ಈ ವೇಳೆ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles