17 C
New York
Monday, September 28, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

*ಮುಂದಿನ 10 ತಿಂಗಳ ಬರಸ್ಥಿತಿ ಎದುರಿಸಲು ಸಿದ್ಧರಾಗಿ: ಅಧಿಕಾರಿಗಳಿಗೆ ಪ್ರಿಯಾಂಕ‌ ಖರ್ಗೆ ಸೂಚನೆ

ಸಮರ್ಥ ನಿರ್ವಹಣೆಗೆ ಸೂಕ್ತ ಕ್ರಿಯಾ ಯೋಜನೆ ರೂಪಿಸಿ

ಕಲಬುರಗಿ,ಆ.10(ಕರ್ನಾಟಕ ವಾರ್ತೆ) ಪ್ರಸ್ತುತ ಬರಗಾಲ ಹಿಂದಿನ ಬರಗಾಲಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಸೂಪರ್ ಎಲ್ನಿನೋದಿಂದ ಬರದ ಛಾಯೆ ಮುನ್ಸೂಚನೆ ಇರುವ ಕಾರಣ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಹೀಟ್ ವೇವ್ ಗಳನ್ನು ಸಮರ್ಥವಾಗಿ ಎದುರಿಸಲು ಮುಂದಿನ 10 ತಿಂಗಳಿಗೆ ಬೇಕಾದ ಕ್ರಿಯಾ ಯೋಜನೆ ರೂಪಿಸಬೇಕು ಎಂದು ರಾಜ್ಯದ ಗೃಹ, ಐ.ಟಿ-ಬಿ.ಟಿ, ಇ.-ಆಡಳಿತ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ (ಪ್ರಕೃತಿ ವಿಕೋಪ) ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬರ ಪರಿಸ್ಥಿತಿ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಕೃಷಿ ಚಟುವಟಿಕೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಇನ್ನು ಮಳೆಗಾಲ ಪೂರ್ಣಗೊಳ್ಳದ ಕಾರಣ ಎನ್.ಡಿ.ಆರ್.ಎಫ್. ನಿಯಮಾವಳಿ ಪ್ರಕಾರ ಘೋಷಣೆ ಮಾಡಿಲ್ಲ. ಮುಂದಿನ ದಿನದಲ್ಲಿ ಇದು ಹೀಗೆ ಮುಂದುವರೆದರೆ ಬರ ಘೋಷಿಸಿದಲ್ಲಿ ಅದಕ್ಕೆ ಪೂರಕವಾಗಿ ತಳ ಹಂತದಿಂದ ಕೆಲಸ ಕಾರ್ಯ ಮಾಡಲು ಎಲ್ಲಾ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಲು ಸಿದ್ಧರಿರಬೇಕು. ಜನ ಮತ್ತು ಜಾನುವಾರುಗಳಗೆ ನೀರು ಪೂರೈಕೆ ನಮ್ಮ ಮೊದಲ ಆದ್ಯತೆಯಾಗಿರಬೇಕು. ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ನೋಡಿಕೋಳ್ಳುವುದರ ಜೊತೆಗೆ ಗೋಶಾಲಾ ತೆರೆಯಲು ಊರು ಗುರತಿಸಬೇಕು ಎಂದರು.

ವಿಶೇಷವಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ನೀರಿನ ಸಮಸ್ಯೆ ಇರುವ ಹಳ್ಳಿಗಳಿಗೆ ಹೋಗಿ ಅವರ ಸಮಸ್ಯೆ ಆಲಿಸಬೇಕು. ಚಿತ್ತಾಪುರ, ಸೇಡಂ, ಚಿಂಚೋಳಿಯಿಂದ ಕುಡಿಯುವ ನೀರಿನ ಸಮಸ್ಯೆ ಕುರಿತು ಅಲ್ಲಿನ ಜನ ನನಗೆ ಕರೆ ಮಾಡುತ್ತಾರೆ. ಅನೇಕ ಅಧಿಕಾರಿಗಳು ಮೋಬೈಲ್ ಕರೆ ಸ್ವೀಕರಿಸಿಲ್ಲ ಎಂಬ ಆರೋಪವಿದೆ. ಸಚಿವನಾಗಿರುವ ನಾನೇ ಕರೆ ಸ್ವೀಕರಿಸಿ ಅವರೆ ಸಮಸ್ಯೆ ಆಲಿಸಬೇಕಾದರೆ ನಿಮಗೇನು ತೊಂದರೆ? ಎಂದು ಅಧಿಕಾರಿಗನ್ನು ಖಾರವಾಗಿ ಪ್ರಶ್ನಿಸಿದ ಸಚಿವರು, ಸಾರ್ವಜನಿಕರ ಸಮಸ್ಯೆಗಳಿಗೆ ಪ್ರಥಮಾದ್ಯತೆ ಮೇಲೆ ಸ್ಪಂದಿಸುವ ಮತ್ತು ಮಾನವೀಯತೆಯಿಂದ ಕಾರ್ಯನಿರ್ವಹಿಸುವ ಗುಣ ಅಧಿಕಾರಿಗಳು ಹೊಂದುವುದು ಅವಶ್ಯಕತೆ ಇದೆ ಎಂದರು.

ಹಿಂದಿನ ಬರದ ಸಂದರ್ಭದಲ್ಲಿ ನೀರು ಪೂರೈಸಿದ ಖಾಸಗಿ ಬೋರವೇಲ್ ಮಾಲೀಕರಿಗೆ ಇನು ಹಣ ಪಾವತಿಸಿಲ್ಲ ಎಂದು ಅರಿತ ಅಸಮಾಧಾನ್ಯ ವಯಕ್ತಪಡಿಸಿದ ಅವರು, ಹಿಂದಿನ ವರ್ಷದ ಪಾವತಿ ಬಾಕಿ ಇದ್ದರೆ ಈಗ ನಿಮಗೆ ನೀರು ಕೊಡರ‍್ಯಾರು ಎಂದರಲ್ಲದೆ ಟಾಸ್ಕ್ ಫೊರ‍್ಸ್ ಸಮಿತಿ ಆದೇಶದಂತೆ ಕಾರ್ಯನಿರ್ವಹಿಸುವುದಲ್ಲದೆ ತಕ್ಷಣವೇ ಬಿಲ್ಲು ಪಾವತಿ ಸಹ ಮಾಡಬೇಕು. ಸಮಸ್ಯೆ ಇರುವ ಕಡೆ ಮೊದಲು ಬಾಡಿಗೆ ಬೋರವೆಲ್ ಪಡೆಬೇಕು, ನಂತರ ಫ್ಲಶ್ಶಿಂಗ್ ಮಾಡಬೇಕು. ಅದು ಸಾಧ್ಯವಾಗದಿದ್ದಲ್ಲಿ ಹೊಸದಾಗಿ ಬೋರವೆಲ್ ಕೊರೆಯಬೇಕು. ಈ ಹಿಂದೆ ಆರ್.ಡಿ.ಪಿ.ಆರ್. ಸಚಿವನಾಗಿದ್ದಾಗಿ ಎಸ್.ಓ.ಪಿ ನೀಡಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದರು.

ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ್ ಸಂಕನೂರ ಮಾತನಾಡಿ ಜಿಲ್ಲೆಯ 8 ತಾಲೂಕುಗಳ 35 ಗ್ರಾಮ ಪಂಚಾಯತಿಗಳ ವ್ಯಾಪ್ತಿಯ 41 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, 5 ಟ್ಯಾಂಕರ್ ಮೂಲಕ 5 ಗ್ರಾಮಗಳಿಗೆ ಮತ್ತು 4 ಖಾಸಗಿ ಬೋರವೆಲ್ ಬಾಡಿಗೆಗೆ ಪಡೆದು 36 ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಮುಂದಿನ ದಿನದಲ್ಲಿ ಬರದ ಕ್ಷಾಮ ಹೆಚ್ಚಾದಲ್ಲಿ ಅದಕ್ಕೂ ಬೇಕಾದ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದರು.

ರಸಗೊಬ್ಬರ ಅಂಗಡಿಗಳಲ್ಲಿ ದರ ಪ್ರದರ್ಶಿಸಿ:

ರಸಗೊಬ್ಬರ ಅಂಗಡಿಗಳ ಮಾಲೀಕರು ರೈತರಿಂದ ಹೆಚ್ಚಿನ ದರ ಪಡೆದು ರಸಗೊಬ್ಬರ ಮಾರಾಟ ಮಾಡಲಾಗುತ್ತದೆ ಎಂಬುದು ರೈತನ ಸಾಮಾನ್ಯ ದೂರು. ಇದಕ್ಕೆ ಅವಕಾಶ ನೀಡದ ರೀತಿಯಲ್ಲಿ ಪ್ರತಿ ಅಂಗಡಿಗಳ ಮುಂದೆ ಪ್ರತಿ ದಿನದ ದಾಸ್ತಾನು ಮತ್ತು ರಸಗೊಬ್ಬರ ದರ ನಮೂದಿಸಬೇಕು. ಕೃಷಿ ಅಧಿಕಾರಿಗಳು ನಿರಂತರವಾಗಿ ಇಂತಹ ಅಂಗಡಿಗಳನ್ನು ತಪಾಸಣೆ ಮಾಡಬೇಕು. ಕಾಳ ಸಂತೆಯಲ್ಲಿ ರಸಗೊಬ್ಬರ ಮಾರಾಟ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇನ್ನು ನಿಯಮ ಉಲ್ಲಂಘಿಸಿದ 7 ಅಂಗಡಿಗಳ ಅಮಾನತ್ತಿಗೆ ಈಗಾಗಲೆ ಪ್ರಸ್ತಾವನೆ ಸಲ್ಲಿಸಿರುವುದರಿಂದ ಕೂಡಲೆ ಸದರಿ ಅಂಗಡಿ ಅಮಾನತ್ತು ಮಾಡುವಂತೆ ಕೃಷಿ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು.

ಆ.14 ರೊಳಗೆ ವರದಿ ಕೊಡಿ:

ಕಲಬುರಗಿ ನಗರದ ಸುಮಾರು 35 ವಾರ್ಡ್ಗಳಲ್ಲಿ ಇನ್ನು ಕುಡಿಯುವ ನೀರಿನ ಸಮಸ್ಯೆ ಇದೆ. ಜುಲೈ ಅಂತ್ಯದ ವರೆಗೆ ಸಮರ್ಪಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು. ಆಗಸ್ಟ್ 1 ರಿಂದ ಟ್ಯಾಂಕರ್ ನೀರು ಸ್ಥಗಿತಗೊಳಿಸಿದ್ದು ಸಮಸ್ಯೆಯಾಗಿದೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಮತ್ತು ಕನೀಜ್ ಫಾತಿಮಾ ಸಚಿವರ ಗಮನಕ್ಕೆ ತಂದರು.

ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಮಾತನಾಡಿ, ನಗರದಲ್ಲಿ ಬೇಡಿಕೆ ಇರುವ ವಾರ್ಡ್ಗಳಿಗೆ ಪ್ರತಿ ದಿನ 50 ಟ್ರಿಪ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಎಲ್ & ಟಿ ಕಂಪನಿಯವರು ಟ್ಯಾಂಕರ್ ಮೂಲಕ ನೀರು ಪೂರೈಕೆ ನಿಲ್ಲಿಸಿದ್ದರಿಂದ ಕೆಲವು ಬಡಾವಣೆಯಲ್ಲಿ ಸಮಸ್ಯೆ ಉದ್ಭವವಾಗಿದೆ ಎಂದರು.

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, 50 ಟ್ಯಾಂಕ್ ನೀರು ಯಾವುದಕ್ಕೂ ಸಾಲುವುದಿಲ್ಲ. ಶಾಸಕರ ಸೂಚನೆಯಂತೆ ನೀರು ಪೂರೈಸಬೇಕು. ಪ್ರಸ್ತುತ ನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸಮಗ್ರವಾಗಿ ವರದಿ ಇದೇ ಆಗಸ್ಟ್ 14 ರೊಳಗೆ ನೀಡಿದಲ್ಲಿ ಅದಕ್ಕೆ ಸರ್ಕಾರದ ಹಂತದಲ್ಲಿ ಹೆಚ್ಚಿನ ಅನುದಾನ ಪಡೆದು ಪರಿಹಾರ ಕಂಡುಕೊಳ್ಳಲಾಗುವುದು. ಇನ್ನು ನೀರು ಪೂರೈಸಲು ವಿಫಲರಾಗಿರುವ ಎಲ್ & ಟಿ ಕಂಪನಿ ಮೇಲೆ ಕೂಡಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರಿಗೆ ಸಚಿವರು ನಿರ್ದೇಶನ ನೀಡಿದರು.

ಮಧ್ಯಂತರ ಪರಿಹಾರ ಕೊಡಿ:

ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ ಜಿಲ್ಲೆಯಲ್ಲಿ ಹೆಸರು, ಉದ್ದು, ಸೋಯಾಬಿನ್, ತೊಗರಿ ಹಾಳಾಗಿದೆ. ಬೆಳೆ ವಿಮೆ ಮಾಡಿಸಿದ ರೈತರಿಗೆ ಮಧ್ಯಂತರ ಪರಿಹಾರ ನೀಡಬೇಕು. ಇನ್ನು ರೈತರಿಗೆ ಡಿ.ಎ.ಪಿ. ಜೊತೆಗೆ ಇತರೆ ರಸಗೊಬ್ಬರ ಖರೀದಿಗೆ ಅಂಗಡಿಯವರು ಒತ್ತಾಯ ಮಾಡುತ್ತಿದ್ದು, ಇದು ಅನಗತ್ಯ ರೈತರಿಗೆ ಹೊರೆಯಾಗುತ್ತಿದೆ. ಇಂತಹ ಅಂಗಡಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಜಂಟಿ ಕೃಷಿ ನಿರ್ದೇಶಕರಿಗೆ ಸೂಚನೆ ನೀಡಿದರು. ಇದಕ್ಕೆ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಉತ್ತರಿಸುತ್ತಾ ಈಗಾಗಲೆ 37,051 ರೈತರಿಗೆ ಮಧ್ಯಂತರ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಮಾಹಿತಿ ನೀಡಿದರು.

ಕೃಷಿ ಇಲಾಖೆ ಚರ್ಚೆ ವೇಳೆ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಜಿಲ್ಲೆಯಾದ್ಯಂತ ಮುಂಗಾರು ಪೂರ್ವ ಜೂನ್ ಅಂತ್ಯಕ್ಕೆ ಶೇ.36, ಜುಲೈ ಮತ್ತು ಆಗಸ್ಟ್ ಮಾಹೆಯಲ್ಲಿ ಶೇ.35ರಷ್ಟು ಮಳೆ ಕೊರತೆಯಾಗಿದೆ. ಪ್ರಸಕ್ತ ಮುಮಘಾರುಯ ಹಂಗಾಮಿನಲ್ಲಿ ವಾಡಿಕೆಗ್ಗಿಂತ ಮಳೆ ಕಡಿಮೆಯಾದ ಕಾರಣ 8.90 ಲಕ್ಷ ಹೆಕಟೇರ್‌ನಲ್ಲಿ ಕೇವಲ 5.37 ಲಕ್ಷ ಹೆಕ್ಟೇರ್ ಪ್ರದೇಶ ಮಾತ್ರ ಬಿತ್ತನೆ ಮಾಡಲು ಸಾಧ್ಯವಾಗಿದೆ. ಬೆಳೆ ವಿಮೆ ನೋಂದಣಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಇದೂವರೆಗೆ 4.52 ಲಕ್ಷ ರೈತರು ಸುಮಾರು 5.35 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಮೆ ನೋಂದಣಿ ಮಾಡಿಕೊಂಡಿದ್ದಾರೆ ಎಂದರು.

ಸಭೆಯಲ್ಲಿ ಸಾಸಕರಾದ ಎಂ.ವೈ.ಪಾಟೀಲ, ಬಸವರಾಜ ಮತ್ತಿಮಡು, ಅವಿನಾಶ ಜಾಧವ, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಅರುಣಕುಮಾರ ಪಾಟೀಲ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಹರವಾಳ, ಕಾಡಾ ಅಧ್ಯಕ್ಷ ಡಾ.ಅಬ್ದುಲ್ ರಶೀದ್, ಕಲಬುರಗಿ-ಬೀದರ ಹಾಗೂ ಯಾದಗಿರಿ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ, ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ವರ್ಷಾ ರಾಜೀವ ಜಾನೆ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಇಕ್ರಂ ಶರೀಫ್, ಕಲಬುರಗಿ ನಗರ ಪೊಲೀಸರ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸುಲು ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles