14.6 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ವಿದ್ಯಾರ್ಥಿಗಳ ಮೇಲಿನ ಎಲ್ಲಾ ಎಫ್‌ಐಆರ್‌ಗಳನ್ನು ಕಡ್ಡಾಯವಾಗಿ ಹಿಂಪಡೆಯಬೇಕೆಂದು ಆಗ್ರಹಿಸಿ ಯುವ ಕಾಂಗ್ರೆಸ್ ಸತ್ಯಾಗ್ರಹ 

ಬೆಂಗಳೂರು, ಆ.3: ದೆಹಲಿಯಲ್ಲಿ ನೀಟ್ ಅಕ್ರಮ ವಿರೋಧಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು (ಎಫ್ ಐ ಆರ್) ಕಡ್ಡಾಯವಾಗಿ ಹಿಂಪಡೆಯಬೇಕೆಂದು ಒತ್ತಾಯಿಸಿ  ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಬೃಹತ್ ಸತ್ಯಾಗ್ರಹ ನಡೆಸಲಾಯಿತು.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷರಾದ ಎಚ್.ಎಸ್.ಮಂಜುನಾಥ್ ಅವರ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಸೋಮವಾರ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿ ಆಯೋಜಿಸಿದ್ದ ಒಂದು ದಿನದ ಸತ್ಯಾಗ್ರಹದಲ್ಲಿ ಮಾತನಾಡಿದ ಕೆಪಿವೈಸಿಸಿ ರಾಜ್ಯ ಉಪಾಧ್ಯಕ್ಷರಾದ ಚೈತ್ರಾ
ಅವರು, ”ವಿದ್ಯಾರ್ಥಿಗಳು ತಮ್ಮ ಭವಿಷ್ಯ ಮತ್ತು ಪರೀಕ್ಷಾ ವ್ಯವಸ್ಥೆಯ ಪಾರದರ್ಶಕತೆಗಾಗಿ ಧ್ವನಿ ಎತ್ತಿರುವುದು ಸಂವಿಧಾನಬದ್ಧ ಹಕ್ಕು. ಆದರೆ, ಅವರ ನ್ಯಾಯಸಮ್ಮತ ಬೇಡಿಕೆಗಳಿಗೆ ಸ್ಪಂದಿಸುವ ಬದಲು ಲಾಠಿಚಾರ್ಜ್ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸಿದ್ದು ಆತಂಕಕಾರಿ ಬೆಳವಣಿಗೆ. ಇದು ದೇಶದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯಲಿದೆ,” ಎಂದು ಬೇಸರ ವ್ಯಕ್ತಪಡಿಸಿದರು.

”ಬಿಹಾರದ ಸಿವಾನ್‌ನಲ್ಲಿ ‘ನೀಟ್’ ಪರೀಕ್ಷಾ ಅಕ್ರಮಗಳ ವಿರುದ್ಧ ನ್ಯಾಯ ಕೇಳಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಎಕೆ-47 (AK-47) ನಂತಹ ಮಾರಣಾಂತಿಕ ಶಸ್ತ್ರಾಸ್ತ್ರ ಬಳಸಿ ಗುಂಡಿನ ದಾಳಿ ನಡೆಸಿರುವ ಘಟನೆ ಅತ್ಯಂತ ಅಮಾನವೀಯ ಮತ್ತು ಗಾಯದ ಮೇಲೆ ಬರೆ ಎಳೆಯುವ ಕೃತ್ಯ. ಈ ಘಟನೆಗಳ ಕುರಿತು ಅಮಿತ್ ಶಾ ಅವರಿಗೆ ಮೊದಲೇ ತಿಳಿದಿದ್ದರೆ ಅವರೇ ಇವುಗಳಿಗೆ ಆದೇಶ ನೀಡಿರುತ್ತಾರೆ. ಅಥವಾ ಅವರಿಗೆ ಇವುಗಳ ಕುರಿತು ಮಾಹಿತಿ ಇರಲಿಲ್ಲವಾದರೆ ಅವರು ಗೃಹ ಸಚಿವ ಸ್ಥಾನಕ್ಕೆ ಯೋಗ್ಯರಲ್ಲ,” ಎಂದು ಕಿಡಿಕಾರಿದ ಚೈತ್ರಾ ಅವರು, ”ಅಸಮರ್ಥ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು,” ಎಂದು ಆಗ್ರಹಿಸಿದರು.

ಕೆಪಿವೈಸಿಸಿ ರಾಜ್ಯ ಉಪಾಧ್ಯಕ್ಷರಾದ ದಿವ್ಯಾ ಮಾತನಾಡಿ, “ದೆಹಲಿಯಲ್ಲಿ ನೀಟ್ ಅಕ್ರಮ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಪತ್ತೆಹಚ್ಚಲು, ದೆಹಲಿ ಪೊಲೀಸರು ಎಐ ಕ್ಯಾಮೆರಾ ಮತ್ತು ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನ ಬಳಕೆ ಮಾಡುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಪ್ರತಿಭಟನೆ ಕುರಿತು ಯೋಚನೆಯನ್ನೂ ಮಾಡಬಾರದು ಎಂದು ಭಯ ಹರಡುವ ಷಡ್ಯಂತ್ರ. ದೇಶದ ಜನದನಿಯನ್ನು ಅಡಗಿಸುವ ಕುತಂತ್ರ. ಈ ರೀತಿಯ ಮುಂದುವರಿದ, ಅತ್ಯಾಧುನಿಕ ತಂತ್ರಜ್ಞಾನವನ್ನು ಪಾರದರ್ಶಕ ಪರೀಕ್ಷೆ ನಡೆಸಲು, ಉತ್ತಮ ಆಡಳಿತ ನೀಡಲು, ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಲು ಬಳಸಲಿ,” ಎಂದು ಲೇವಡಿ ಮಾಡಿದರು.

“ದೇಶದ ಯುವಜನತೆ ಭಯದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಬಾರದು. ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕುವ ಬದಲು ಅವರಿಗೆ ನ್ಯಾಯ ಒದಗಿಸುವುದು ಸರ್ಕಾರದ ಕರ್ತವ್ಯ. ಆ ನಿಟ್ಟಿನಲ್ಲಿ ಕೇವಲ ಕ್ಯಾಮೆರಾ ಮುಂದೆ ಬಂದು ಫ್ರೆಂಡ್ಸ್, ನಾನು ಯುವಕರು ವಿದ್ಯಾರ್ಥಿಗಳ ಪರ ಇದ್ದೇನೆ ಎಂದು ಪ್ರಚಾರ ಕುತಂತ್ರ ಮಾಡುವುದನ್ನು ಬಿಟ್ಟು, ಪ್ರತಿಭಟನಾಕಾರರ ವಿರುದ್ಧದ ಪ್ರಕರಣಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು,” ಎಂದು ಒತ್ತಾಯಿಸಿದರು.

ಈ ವೇಳೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿಗಾರರು: ಸೋಮಶೇಖರ ಲಮಾಣಿ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles