15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಶಿಕ್ಷೆ ಅಂತ್ಯವಲ್ಲ; ಹೊಸ ಬದುಕಿನ ಆರಂಭ , ಸನ್ನಡತೆಯಿಂದ ಬಿಡುಗಡೆಯಾದ 24 ಖೈದಿಗಳಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಮಾಣಪತ್ರ ವಿತರಣೆ

ಬೆಂಗಳೂರ :: ಸನ್ನಡತೆಯ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆಗೊಂಡ 24 ಖೈದಿಗಳು ಸಮಾಜದ ಮುಖ್ಯವಾಹಿನಿಗೆ ಮರಳಿ ಜವಾಬ್ದಾರಿಯುತ ನಾಗರಿಕರಾಗಿ ಹೊಸ ಬದುಕು ಕಟ್ಟಿಕೊಳ್ಳಬೇಕು ಎಂದು ರಾಜ್ಯದ ಗೃಹ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಕರೆ ನೀಡಿದರು.

ಬೆಂಗಳೂರು ಕೇಂದ್ರ ಕಾರಾಗೃಹ, ಪರಪ್ಪನ ಅಗ್ರಹಾರದಲ್ಲಿ ಸನ್ನಡತೆಯ ಆಧಾರದ ಮೇಲೆ ಬಿಡುಗಡೆಯಾದ 24 ಖೈದಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಅವರು, ಶಿಕ್ಷೆ ಎಂಬುದು ವ್ಯಕ್ತಿಯ ಜೀವನದ ಅಂತ್ಯವಲ್ಲ; ಅದು ಜೀವನವನ್ನು ತಿದ್ದಿಕೊಳ್ಳಲು ದೊರೆಯುವ ಅವಕಾಶವಾಗಿದೆ. ಸಮಾಜಕ್ಕೆ ಮರಳಿದ ಬಳಿಕ ಕಾನೂನು ಪಾಲಿಸುವ ಪ್ರಜೆಯಾಗಿ ಬದುಕುವುದರ ಮೂಲಕ ತಮ್ಮಿಂದಾದ ಪ್ರಮಾದಕ್ಕೆ ಅರ್ಥಪೂರ್ಣ ಪ್ರಾಯಶ್ಚಿತ್ತ ಸಲ್ಲಿಸಬೇಕು ಎಂದು ತಿಳಿಸಿದರು.

ರಾಜ್ಯ ಸರ್ಕಾರ ಕಾರಾಗೃಹಗಳನ್ನು ಕೇವಲ ಶಿಕ್ಷೆ ಅನುಭವಿಸುವ ಸ್ಥಳಗಳನ್ನಾಗಿ ಅಲ್ಲ, ವ್ಯಕ್ತಿತ್ವ ಪರಿವರ್ತನೆ ಮತ್ತು ಪುನರ್ವಸತಿಯ ಕೇಂದ್ರಗಳನ್ನಾಗಿ ರೂಪಿಸಲು ಬದ್ಧವಾಗಿದೆ. ಖೈದಿಗಳಿಗೆ ಶಿಕ್ಷಣ, ಕೌಶಲಾಭಿವೃದ್ಧಿ, ಉದ್ಯೋಗ ತರಬೇತಿ ಹಾಗೂ ಮಾನಸಿಕ ಸದೃಢತೆಗೆ ಅಗತ್ಯವಾದ ಎಲ್ಲ ಅವಕಾಶಗಳನ್ನು ಒದಗಿಸಲಾಗುತ್ತಿದೆ. ಇದರಿಂದ ಬಿಡುಗಡೆಯಾದ ನಂತರ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.

ಕಾರ್ಯಕ್ರಮದ ಬಳಿಕ ಸಚಿವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಂಪ್ಯೂಟರ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖೈದಿಗಳೊಂದಿಗೆ ಮಾತುಕತೆ ನಡೆಸಿ, ಅವರಿಗೆ ನೀಡಲಾಗುತ್ತಿರುವ ತರಬೇತಿ, ಉದ್ಯೋಗ ಕೌಶಲಾಭಿವೃದ್ಧಿ ಹಾಗೂ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.
ನಂತರ ಕಾರಾಗೃಹದ ಅಡುಗೆಮನೆಗೆ ಭೇಟಿ ನೀಡಿ ಖೈದಿಗಳಿಗೆ ತಯಾರಾಗುತ್ತಿದ್ದ ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಿದರು. ಖೈದಿಗಳು ತಯಾರಿಸಿದ ವಿವಿಧ ಕರಕುಶಲ ವಸ್ತುಗಳನ್ನು ವೀಕ್ಷಿಸಿ ಅವರ ಕೌಶಲ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಇಂತಹ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ಮೂಲಕ ಬಿಡುಗಡೆಯ ನಂತರವೂ ಖೈದಿಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗುವ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದು ಹೇಳಿದರು.

ಅಲ್ಲದೆ, ಕಾರಾಗೃಹದಲ್ಲಿರುವ ಖೈದಿಗಳ ಮಕ್ಕಳಿಗಾಗಿ ಸ್ಥಾಪಿಸಲಾಗಿರುವ ಕಲಿಕಾ ಕೇಂದ್ರಕ್ಕೂ ಭೇಟಿ ನೀಡಿ ಮಕ್ಕಳೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದರು. ಮಕ್ಕಳ ಶಿಕ್ಷಣ ಮತ್ತು ಭವಿಷ್ಯ ಯಾವುದೇ ಕಾರಣಕ್ಕೂ ಹಿನ್ನಡೆಯಾಗಬಾರದು ಎಂಬುದು ಸರ್ಕಾರದ ಆದ್ಯತೆಯಾಗಿದ್ದು, ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಕಾರಾಗೃಹಗಳನ್ನು ತಾಂತ್ರಿಕವಾಗಿ ಹಾಗೂ ಉದ್ಯೋಗಪರವಾಗಿ ಇನ್ನಷ್ಟು ಸಬಲಗೊಳಿಸಲು ಸಮಗ್ರ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಮಾಹಿತಿ ತಂತ್ರಜ್ಞಾನ, ಡಿಜಿಟಲ್ ಕೌಶಲ್ಯ, ವೃತ್ತಿಪರ ತರಬೇತಿ ಮತ್ತು ಉದ್ಯೋಗಮುಖಿ ಚಟುವಟಿಕೆಗಳನ್ನು ಮತ್ತಷ್ಟು ವಿಸ್ತರಿಸಿ, ಬಿಡುಗಡೆಯಾದ ನಂತರ ಖೈದಿಗಳು ಗೌರವಯುತ ಜೀವನ ನಡೆಸಲು ಅಗತ್ಯ ಸಾಮರ್ಥ್ಯವನ್ನು ಬೆಳೆಸುವ ದಿಸೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಸನ್ನಡತೆಯಿಂದ ಬಿಡುಗಡೆಯಾದ ಎಲ್ಲರೂ ತಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಬೇಕು. ಸಮಾಜದ ವಿಶ್ವಾಸವನ್ನು ಮರುಗಳಿಸಿ, ತಮ್ಮ ಜೀವನದ ಮೂಲಕವೇ ಇತರರಿಗೆ ಉತ್ತಮ ಸಂದೇಶ ನೀಡಬೇಕು ಎಂದು ಅವರು ಕರೆ ನೀಡಿದರು.

ಸಚಿವರೊಂದಿಗೆ ಕಿಯೊನಿಕ್ಸ್‌ ಅಧ್ಯಕ್ಷ ಶರತ್‌ ಬಚ್ಚೇಗೌಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಎಡಿಜಿಪಿ ಅಲೋಕ್ ಕುಮಾರ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles