ಯಾದಗಿರಿ: ಪರಿಶಿಷ್ಟ ಜಾತಿಯ ಅಲೆಮಾರಿ ಸಿಂದ್ದೂಳ್ ಸಮುದಾಯವು ಹಲವು ವರ್ಷಗಳಿಂದ ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತವಾಗಿದ್ದು, ಮನೆ ಹಾಗೂ ಮನೆ ಸಾಲ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸದೆ ಇರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.
ಕರ್ನಾಟಕ ಸಿಂದ್ದೂಳ್ ಸಮಾಜ ರಾಜ್ಯ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಶ್ರೀನಿವಾಸ ಎಸ್.ಆರ್. ಅವರು ಯಾದಗಿರಿಗೆ ಆಗಮಿಸಿ, ಅಲೆಮಾರಿ ಸಿಂದ್ದೂಳ್ ಸಮುದಾಯದ ಸಮಸ್ಯೆಗಳನ್ನು ಆಲಿಸಿ, ಸರ್ಕಾರದ ವತಿಯಿಂದ ಸಮುದಾಯಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
“ಇಲ್ಲಿಯವರೆಗೆ ಯಾವುದೇ ಸಮರ್ಪಕ ಸೌಲಭ್ಯ ಸಿಗದೆ ಸಂಕಷ್ಟದಲ್ಲಿರುವ ಈ ಮುಗ್ಧ ಅಲೆಮಾರಿ ಸಮುದಾಯಕ್ಕೆ ಸರ್ಕಾರ ಯಾವಾಗ ಕಣ್ಣಿಗೆ ಕಾಣುತ್ತದೆ?” ಎಂದು ಪ್ರಶ್ನಿಸಿದ ರಾಜ್ಯಾಧ್ಯಕ್ಷರು, ಸಮುದಾಯದ ಜನರಿಗೆ ಮನೆ, ಮನೆ ಸಾಲ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವಂತೆ ಒತ್ತಾಯಿಸಿದರು.
ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ವಿಶೇಷ ಕ್ರಮ ಕೈಗೊಳ್ಳಬೇಕು. ಅಲೆಮಾರಿ ಜೀವನ ನಡೆಸುತ್ತಿರುವ ಸಿಂದ್ದೂಳ್ ಸಮುದಾಯದ ಜನರಿಗೆ ಶಾಶ್ವತ ನೆಲೆ, ವಸತಿ ಹಾಗೂ ಜೀವನೋಪಾಯಕ್ಕೆ ಅಗತ್ಯ ನೆರವು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಗಮನಹರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿಂದ್ದೂಳ್ ಸಮುದಾಯದ ಜಿಲ್ಲಾ ಮುಖಂಡರಾದ ಶ್ರೀ ಕಾಟೆಪ್ಪ ಸಿಂದ್ದೂಳ್ ಅವರು ಉಪಸ್ಥಿತರಿದ್ದು, ಸಮುದಾಯದ ಸಮಸ್ಯೆಗಳ ಕುರಿತು ಚರ್ಚಿಸಿದರು.
ಅದೇ ರೀತಿ ಅಲೆಮಾರಿ ಸಮುದಾಯಗಳ ಹಕ್ಕುಗಳ ಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತಿರುವ ಅಲೆಮಾರಿ ಒಕ್ಕೂಟದ ಅಧ್ಯಕ್ಷರು ಹಾಗೂ ಕೊರಮ ಸಂಘದ ಜಿಲ್ಲಾ ಅಧ್ಯಕ್ಷರಾದ ಜಿ. ಯಲ್ಲಪ್ಪ ಭಜಂತ್ರಿ ಅವರು ಸಿಂದ್ದೂಳ್ ಸಮುದಾಯದ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಸಿಂದ್ದೂಳ್ ಸಮುದಾಯದ ಬಹುದಿನಗಳ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅರ್ಹ ಕುಟುಂಬಗಳಿಗೆ ಮನೆ, ಮನೆ ಸಾಲ ಹಾಗೂ ಇತರೆ ಸರ್ಕಾರಿ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಬೇಕು. ಇಲ್ಲವಾದಲ್ಲಿ ಸಮುದಾಯದ ಹಕ್ಕುಗಳಿಗಾಗಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವ ಅನಿವಾರ್ಯತೆ ಎದುರಾಗಲಿದೆ ಎಂದು ಮುಖಂಡರು ಎಚ್ಚರಿಸಿದರು.

