ಗದಗ್ : ಲಕ್ಕುಂಡಿಯಲ್ಲಿ (Lakkundi) ಇತ್ತೀಚೆಗಷ್ಟೇ ಬಂಗಾರದ ಆಭರಣ (Ornaments) ಸಿಕ್ಕ ಬೆನ್ನಲ್ಲೇ ಉತ್ಖನನ ನಡೆದಿದೆ. ಈ ನಡುವೆ ಗ್ರಾಮವನ್ನೇ ಸ್ಥಳಾoತರ ಮಾಡುವ ಆತಂಕ ಎದುರಾಗಿದೆ.
ಪುರಾತತ್ವ ಇಲಾಖೆಯ ಮಹತ್ವದ ಉತ್ಖನನ ಕಾರ್ಯಕ್ಕೆ ಶುಕ್ರವಾರ ಅಧಿಕೃತ ಚಾಲನೆ ದೊರೆತಿದ್ದು, ಜಿಲ್ಲಾಧಿಕಾರಿ ಸಿ.ಎನ್.
ಶ್ರೀಧರ್ ಧಾರ್ಮಿಕ ವಿಧಿವಿಧಾನಗಳೊಂದಿಗೆ ಉತ್ಖನನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಪ್ರಸಿದ್ಧ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ಸದ್ಯ ಶೋಧ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಸರ್ಕಾರವು ಪೂರ್ವ ನಿಗದಿತ ಯೋಜನೆಯಂತೆ ಶೋಧ ಕಾರ್ಯ ನಡೆಸುತ್ತಿದೆ. ಕಳೆದ ವಾರ ನಿಧಿ ಸಿಕ್ಕ ಜಾಗದಿಂದ ಸುಮಾರು 250 ಮೀಟರ್ ಅಂತರದಲ್ಲಿ ಶೋಧ ನಡೆಯುತ್ತಿದೆ.
ಈ ಭಾಗದಲ್ಲಿ ದೇವಸ್ಥಾನದ ಕುರುಹುಗಳಿರುವ ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ. ಸದ್ಯಕ್ಕೆ ಗ್ರಾಮ ಸ್ಥಳಾಂತರದ ಯಾವುದೇ ಪ್ರಸ್ತಾಪವಿಲ್ಲ. ಒಂದು ವೇಳೆ ಉತ್ಖನನದಲ್ಲಿ ಅಂತಹ ಮಹತ್ವದ ಅವಶೇಷಗಳು ಪತ್ತೆಯಾದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ಕೇವಲ 1 ಅಡಿ ಆಳದವರೆಗೆ ಮಾತ್ರ ಮಣ್ಣನ್ನು ತೆಗೆಯಲಾಗಿದ್ದು, ಯಾವುದೇ ಪುರಾತತ್ವ ವಸ್ತುಗಳು ಕಂಡುಬಂದಿಲ್ಲ.ಈ ಜಾಗದಲ್ಲಿ ಸುಮಾರು 7ರಿಂದ 8 ಅಡಿ ಆಳದವರೆಗೆ ಅಗೆದರೆ ಐತಿಹಾಸಿಕ ಅವಶೇಷಗಳು ಅಥವಾ ಪ್ರಾಚೀನ ಕಾಲದ ನಿಧಿ ಸಿಗಬಹುದು ಎಂಬ ನಿರೀಕ್ಷೆ ಸ್ಥಳೀಯರಲ್ಲಿ ಮತ್ತು ಇಲಾಖೆಯಲ್ಲಿ ಮನೆಮಾಡಿದೆ.

