14.4 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ನೇಕಾರರ ಸಮಸ್ಯೆಗಳಿಗೆ ಪರಿಹಾರಕ್ಕೆ ಸರ್ಕಾರ ಬದ್ಧ; ಬೇಡಿಕೆಗಳ ಕುರಿತು ಸಿಎಂ ಜೊತೆ ಚರ್ಚೆ: ಸಚಿವ ರುದ್ರಪ್ಪ ಲಮಾಣಿ

  • ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ರಾಜ್ಯದ ವಿವಿಧ ಭಾಗಗಳ ನೇಕಾರರೊಂದಿಗೆ ನೇರ ಸಂವಾದ
  • ಸಾಲದ ಮಿತಿ ಹೆಚ್ಚಳ, ನೇಕಾರ ಸಮ್ಮಾನ, ವಿದ್ಯಾರ್ಥಿವೇತನ, ಮಾಶಾಸನ ಸೇರಿದಂತೆ ಹಲವು ಬೇಡಿಕೆಗಳ ಕುರಿತು ಚರ್ಚೆ
  • ಸರ್ಕಾರಿ ಸಮವಸ್ತ್ರ ಹಾಗೂ ಬಟ್ಟೆ ಖರೀದಿಯಲ್ಲಿ KHDC, KSTIDCL ಮತ್ತು ಕಾವೇರಿ ಹ್ಯಾಂಡ್‌ಲೂಮ್ಸ್‌ಗೆ ಆದ್ಯತೆ ನೀಡಲು ಪ್ರಸ್ತಾವನೆ

ಬೆಂಗಳೂರು, ಸೆಪ್ಟೆಂಬರ್ 24: ನೇಕಾರರ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ಬಲಪಡಿಸುವುದರ ಜೊತೆಗೆ ಅವರ ಉತ್ಪನ್ನಗಳಿಗೆ ಸ್ಥಿರ ಮಾರುಕಟ್ಟೆ ಕಲ್ಪಿಸಲು ಸರ್ಕಾರ ಬದ್ಧವಾಗಿದ್ದು, ಸಂವಾದದಲ್ಲಿ ವ್ಯಕ್ತವಾದ ಬೇಡಿಕೆಗಳನ್ನು ಕ್ರೋಢೀಕರಿಸಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಕ್ಕರೆ ಮತ್ತು ಜವಳಿ ಸಚಿವ ರುದ್ರಪ್ಪ ಲಮಾಣಿ ಭರವಸೆ ನೀಡಿದರು.

ವಿಕಾಸಸೌಧದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಆಯೋಜಿಸಿದ್ದ ನೇಕಾರರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನೇಕಾರರು, ಕೈಮಗ್ಗ ಸಹಕಾರ ಸಂಘಗಳ ಪ್ರತಿನಿಧಿಗಳು ಹಾಗೂ ಉದ್ಯಮಿಗಳ ಅಹವಾಲು ಮತ್ತು ಸಲಹೆಗಳನ್ನು ಸಚಿವರು ಆಲಿಸಿದರು.

“ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ನೇಕಾರರೊಂದಿಗೆ ನೇರ ಸಂವಾದ ನಡೆಸಲಾಗಿದೆ. ನೇಕಾರರ ಜೀವನೋಪಾಯ, ಸಾಮಾಜಿಕ ಭದ್ರತೆ, ಹಣಕಾಸು ನೆರವು ಮತ್ತು ಮಾರುಕಟ್ಟೆಗೆ ಸಂಬಂಧಿಸಿದ ಬೇಡಿಕೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಹಂತ ಹಂತವಾಗಿ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು,” ಎಂದು ಸಚಿವರು ಹೇಳಿದರು.

ಸಂವಾದದಲ್ಲಿ ನೇಕಾರಿಕೆ ಉದ್ದೇಶಗಳಿಗೆ 0% ಹಾಗೂ 3% ಬಡ್ಡಿದರದಲ್ಲಿ ನೀಡುವ ಸಾಲದ ಮಿತಿಯನ್ನು ಕ್ರಮವಾಗಿ ₹2 ಲಕ್ಷದಿಂದ ₹5 ಲಕ್ಷಕ್ಕೆ ಹಾಗೂ ₹5 ಲಕ್ಷದಿಂದ ₹10 ಲಕ್ಷಕ್ಕೆ ಹೆಚ್ಚಿಸುವುದು, 0% ಬಡ್ಡಿದರದ ಕ್ಲೇಮ್‌ಗಳಿಗೆ GST ವಿನಾಯಿತಿ ನೀಡುವ ವಿಷಯ ಸೇರಿದಂತೆ ಹಣಕಾಸು ನೆರವಿಗೆ ಸಂಬಂಧಿಸಿದ ಹಲವು ಬೇಡಿಕೆಗಳ ಕುರಿತು ಚರ್ಚಿಸಲಾಯಿತು.

ಇದರ ಜೊತೆಗೆ ನೇಕಾರರ ಮಕ್ಕಳಿಗೆ ವಿದ್ಯಾರ್ಥಿವೇತನ, ನೇಕಾರ ಸಮ್ಮಾನ ಯೋಜನೆಯ ನೆರವು ಹೆಚ್ಚಳ, ಕಟ್ಟಡ ಕಾರ್ಮಿಕರಿಗೆ ನೀಡುವ ಮಾದರಿಯಲ್ಲೇ ವೃತ್ತಿಪರ ನೇಕಾರರಿಗೂ ಕಾರ್ಮಿಕ ಕಲ್ಯಾಣ ಸೌಲಭ್ಯಗಳನ್ನು ವಿಸ್ತರಿಸುವುದು, 60 ವರ್ಷ ಮೇಲ್ಪಟ್ಟ ನೇಕಾರರಿಗೆ ಮಾಶಾಸನ ಹಾಗೂ ನೇಕಾರರಿಗೆ ನಿವೇಶನ ಒದಗಿಸುವ ಬೇಡಿಕೆಗಳನ್ನು ಪ್ರತಿನಿಧಿಗಳು ಮುಂದಿಟ್ಟರು.

ಆತ್ಮಹತ್ಯೆಗೆ ಶರಣಾದ ನೇಕಾರರ ಕುಟುಂಬಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಸ್ತಾವನೆಗಳನ್ನು ತ್ವರಿತವಾಗಿ ಪರಿಶೀಲಿಸಿ ಪರಿಹಾರ ಕಲ್ಪಿಸುವಂತೆ ನೇಕಾರರ ಪ್ರತಿನಿಧಿಗಳು ಮನವಿ ಮಾಡಿದರು.

ರಾಜ್ಯ ಸರ್ಕಾರ ನೀಡುತ್ತಿರುವ 10 HP ವರೆಗಿನ ವಿದ್ಯುತ್ ಸಬ್ಸಿಡಿ ನೇಕಾರಿಕೆ ಚಟುವಟಿಕೆಗಳಿಗೆ ನೆರವಾಗುತ್ತಿದೆ ಎಂದು ತಿಳಿಸಿದ ಪ್ರತಿನಿಧಿಗಳು, ಹಲವು ವರ್ಷಗಳಿಂದ ಬಾಕಿ ಇರುವ ಸುಮಾರು ₹9.50 ಕೋಟಿ ವಿದ್ಯುತ್ ಸಬ್ಸಿಡಿ ಸಂಬಂಧಿತ ಸಮಸ್ಯೆಯನ್ನು ಪರಿಹರಿಸುವಂತೆ ಕೋರಿದರು. ಪ್ರಮುಖ ನಗರಗಳಲ್ಲಿ ವರ್ಷಪೂರ್ತಿ ಕೈಮಗ್ಗ ಮೇಳಗಳನ್ನು ನಡೆಸಿ ನೇಕಾರರಿಗೆ ನಿರಂತರ ಮಾರುಕಟ್ಟೆ ಕಲ್ಪಿಸುವ ಬೇಡಿಕೆಯನ್ನೂ ಮುಂದಿಟ್ಟರು.

“ಬಾಕಿ ವಿದ್ಯುತ್ ಬಿಲ್ ಮತ್ತು ಸಬ್ಸಿಡಿ ವಿಷಯವನ್ನು ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ನೇಕಾರರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡುವುದರ ಜೊತೆಗೆ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸುವುದೂ ಸರ್ಕಾರದ ಆದ್ಯತೆಯಾಗಿದೆ,” ಎಂದು ರುದ್ರಪ್ಪ ಲಮಾಣಿ ಹೇಳಿದರು.

ಸರ್ಕಾರಿ ಖರೀದಿಯಲ್ಲಿ ನೇಕಾರರ ಉತ್ಪನ್ನಗಳಿಗೆ ಆದ್ಯತೆ

ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ನಿಗಮಗಳಿಗೆ ಅಗತ್ಯವಿರುವ ಸಮವಸ್ತ್ರ ಹಾಗೂ ಇತರೆ ಬಟ್ಟೆಗಳ ಖರೀದಿಯಲ್ಲಿ KHDC, KSTIDCL ಮತ್ತು ಕಾವೇರಿ ಹ್ಯಾಂಡ್‌ಲೂಮ್ಸ್‌ಗೆ ಆದ್ಯತೆ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಹೊಸ ಜವಳಿ ನೀತಿಯಲ್ಲಿ ನೇಕಾರರ ಅಭಿವೃದ್ಧಿ, ಉತ್ಪಾದನೆ, ಮಾರುಕಟ್ಟೆ ಅವಕಾಶ ಮತ್ತು ಉದ್ಯಮ ವಿಸ್ತರಣೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ರೇಷ್ಮೆ ವಲಯವನ್ನೂ ನೀತಿಯ ವ್ಯಾಪ್ತಿಗೆ ತರಲಾಗಿದೆ ಎಂದು ಅವರು ಹೇಳಿದರು.

“ನೇಕಾರರ ಅಭಿವೃದ್ಧಿ ಕೇವಲ ಹಣಕಾಸು ನೆರವಿಗೆ ಸೀಮಿತವಾಗಬಾರದು. ಸಾಮಾಜಿಕ ಭದ್ರತೆ, ಮಕ್ಕಳ ಶಿಕ್ಷಣ, ಮಾರುಕಟ್ಟೆ, ಸಾಲ ಸೌಲಭ್ಯ ಮತ್ತು ಸರ್ಕಾರದ ಖರೀದಿ ವ್ಯವಸ್ಥೆಯವರೆಗೆ ಸಮಗ್ರ ಬೆಂಬಲ ದೊರೆಯಬೇಕು. ಹೊಸ ಜವಳಿ ನೀತಿಯಲ್ಲೂ ಈ ದೃಷ್ಟಿಕೋನಕ್ಕೆ ಆದ್ಯತೆ ನೀಡಲಾಗುತ್ತಿದೆ,” ಎಂದು ಸಚಿವ ರುದ್ರಪ್ಪ ಲಮಾಣಿ ಹೇಳಿದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಐಎಎಸ್; ಕೈಮಗ್ಗ ಮತ್ತು ಜವಳಿ ಇಲಾಖೆ ಆಯುಕ್ತ ಎ.ಬಿ. ಬಸವರಾಜು; ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗೇಂದ್ರ ಕುಮಾರ್; ಕಾವೇರಿ ಹ್ಯಾಂಡ್‌ಲೂಮ್ಸ್ ಅಧ್ಯಕ್ಷ ಬಿ.ಜೆ. ಗಣೇಶ್; ಕರ್ನಾಟಕ ರಾಜ್ಯ ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಕೆ. ಗೌಡ; ಹೆಚ್ಚುವರಿ ನಿರ್ದೇಶಕರಾದ ಸಿ.ಎಸ್. ಯೋಗೇಶ್ ಮತ್ತು ಶ್ರೀಧರ್ ನಾಯಕ್, ಕಾವೇರಿ ಹ್ಯಾಂಡ್‌ಲೂಮ್ಸ್ ವ್ಯವಸ್ಥಾಪಕ ನಿರ್ದೇಶಕಿ ಸೌಮ್ಯ ಎಂ.; ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು, ನೇಕಾರರು, ಸಹಕಾರ ಸಂಘಗಳ ಪ್ರತಿನಿಧಿಗಳು ಹಾಗೂ ಉದ್ಯಮಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles