ಮತದಾರರ ಹಕ್ಕು ರಕ್ಷಣೆಗೆ ದಾಖಲೆಗಳ ನೆರವು: ತಹಶಿಲ್ದಾರರ ಭರವಸೆ
ಮುಂಡಗೋಡ, ಜುಲೈ 16: ಲೊಯೋಲ ವಿಕಾಸ ಕೇಂದ್ರ, ಮುಂಡಗೋಡದಲ್ಲಿ ತಾಲ್ಲೂಕು ನಾಗರಿಕ ಮತ ಕಾವಲು ಸಮಿತಿಯ ಉದ್ಘಾಟನಾ ಕಾರ್ಯಕ್ರಮ ಇಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಂಡಗೋಡ ತಹಶಿಲ್ದಾರರಾದ ಶ್ರೀ. ಎಸ್. ಎ. ಪ್ರಸಾದ , “ಎದ್ದೇಳು ಕರ್ನಾಟಕ” ಅಭಿಯಾನವು ಮತದಾರರ ಹಕ್ಕುಗಳ ರಕ್ಷಣೆ ಹಾಗೂ ಜಾಗೃತಿಗಾಗಿ ನಡೆಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯಾವುದೇ ಮತದಾರರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ಮತದಾರರ ಪಟ್ಟಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳು ಹಾಗೂ ಮಾಹಿತಿ ಕಚೇರಿಯಿಂದ ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಡಾ. ಇಸಬೆಲ್ ಝೇವಿಯರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಾಗರಿಕ ಮತ ಕಾವಲು ಸಮಿತಿಯ ಉದ್ದೇಶ ಹಾಗೂ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಕುರಿತು ಮಾಹಿತಿ ನೀಡಿದರು.
ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಶ್ರೀ ಸಂತೋಷಕುಮಾರ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಮತದಾರರ ಪಟ್ಟಿಯ ಶುದ್ಧೀಕರಣ ಕಾರ್ಯದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಸಹಕರಿಸುವಂತೆ ಮನವಿ ಮಾಡಿದರು.
ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕರಾದ ಅನಿಲ್ ಡಿಸೋಜ ಅವರು ತಹಶಿಲ್ದಾರರನ್ನು ಸನ್ಮಾನಿಸಿದರು.
ಇನ್ಯುಮರೇಷನ್ (Enumeration) ನಮೂನೆಗಳನ್ನು ಭರ್ತಿ ಮಾಡುವ ವಿಧಾನ ಕುರಿತು ಇಸಾಕ್ ಟಮಾಟಗಾರ ಅವರು ವಿವರವಾದ ಮಾಹಿತಿ ನೀಡಿದರು. ನಂತರ ಡಾ. ಇಸಬೆಲ್ ಝೇವಿಯರ್ ಅವರು ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ನಾಗನೂರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ನಾಲ್ಕು ಗ್ರಾಮಗಳ ಪ್ರಮುಖರು, ಲೊಯೋಲ ವಿಕಾಸ ಕೇಂದ್ರದ ಸಿಬ್ಬಂದಿ ಹಾಗೂ ಸಾಧನಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಾಗರಿಕ ಮತ ಕಾವಲು ಸಮಿತಿಯ ತಾಲ್ಲೂಕು ಸಂಚಾಲಕರಾದ ಎಸ್. ಡಿ. ಮುಡೆಣ್ಣವರ ಅವರು ವಂದನಾರ್ಪಣೆ ಸಲ್ಲಿಸಿದರು. ತನ್ವೀರ್ ಮಿರ್ಜಾನಕರ ಅವರು ಸ್ವಾಗತ ಕೋರಿದರು.
ಕಾರ್ಯಕ್ರಮವು ಮತದಾರರ ಹಕ್ಕುಗಳ ರಕ್ಷಣೆ, ಮತದಾರರ ಪಟ್ಟಿಯ ಪರಿಷ್ಕರಣೆ ಹಾಗೂ ಸಾರ್ವಜನಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಅಭಿಪ್ರಾಯ ಮೂಡಿತು.
ಈ ಕಾರ್ಯಕ್ರಮದಲ್ಲಿ ಫಾ. ಅನಿಲ. ಡಿಸೋಜ, ನಿರ್ದೇಧಕರು, ಎಲ್. ವಿ. ಕೆ, ಶ್ರೀಮತಿ. ಅಕ್ಷತಾ. ಬುದ್ನಿ, ಸಾಧನಾ ಸಂಸ್ಥೆಯ ಸಿಬ್ಬಂದಿ ಮತ್ತು ಮುಂತಾದವರು ಹಾಜರಿದ್ದರು.


ವರದಿಗಾರರು: ಬಸಯ್ಯ ತೋಟಯ್ಯನವರ

