ನವದೆಹಲಿ: ಈಚೆಗೆ ದುಬೈ ಏರ್‌ಶೋ ವೇಳೆ ಪತನಗೊಂಡ ಭಾರತೀಯ ವಾಯುಪಡೆಯ ‘ತೇಜಸ್’ ಲಘು ಯುದ್ಧ ವಿಮಾನ ದುರಂತದಲ್ಲಿ ಮೃತಪಟ್ಟ ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ಅವರ ಅಂತ್ಯಸಂಸ್ಕಾರವನ್ನು ಭಾನುವಾರ ಹಿಮಾಚಲ ಪ್ರದೇಶದಲ್ಲಿ ನೆರವೇರಿಸಲಾಯಿತು.
ನಮಾಂಶ್ ಸಯಾಲ್ ಅವರ ಪಾರ್ಥಿವ ಶರೀರವನ್ನು ಇಂದು ಬೆಳಗ್ಗೆ ಕೊಯಮತ್ತೂರಿನ ಸುಲೂರು ವಾಯುನೆಲೆಗೆ ತಂದು ನಮನ ಸಲ್ಲಿಸಲಾಯಿತು.
ಬಳಿಕ ಸಯಾಲ್ ಹುಟ್ಟೂರಾದ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಪಟಿಯಾಲ್ಕರ್‌ಗೆ ಕೊಂಡೊಯ್ಯಲಾಯಿತು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ವಾಯುಪಡೆ ಅಧಿಕಾರಿಯೂ ಆಗಿರುವ ಸಯಾಲ್ ಅವರ ಪತ್ನಿ ಅಫ್ಶಾನ್, 6 ವರ್ಷದ ಮಗಳು ಹಾಗೂ ಪೋಷಕರು ಸಯಾಲ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಸಕಲ ಸೇನಾ ಗೌರವಗಳೊಂದಿಗೆ ಸಯಾಲ್ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

